ಮುಂದಿನ ಎರಡರಿಂದ ಮೂರು ವಾರಗಳಲ್ಲೇ ಭಾರತವು ಇರಾನ್‌ನೊಂದಿಗಿನ ಅನಿಲ ಕೊಳವೆ ಯೋಜನೆಗೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಸಚಿವ ಮುರಲಿ ದೇವುರಾ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಒಪ್ಪಂದದ ಕುರಿತಾಗಿ ಇರಾನ್‌ನೊಂದಿಗಿದ್ದ ಭಿನ್ನಹವನ್ನು ಭಾರತವು ಹೋಗಲಾಡಿಸಿರುವುದಾಗಿ ಹೇಳಿದ ಅವರು, ಈ ಒಪ್ಪಂದವನ್ನು ಮುಂದುವರಿಸದಂತೆ ಅಮೆರಿಕವು ಯಾವುದೇ ಒತ್ತಡವನ್ನು ಹೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿದ್ದಾ ತೈಲ ಶೃಂಗಸಭೆಯ ವೇಳೆ ಇರಾನಿಯನ್ ಸಚಿವರನ್ನು ದೇವುರಾ ಅವರು ಭೇಟಿ ಮಾಡಿದ್ದು, ಪೂರ್ವ ನಿಗದಿಯಲ್ಲದ ಈ ಭೇಟಿಯು ಧನಾತ್ಮಕ ಫಲಿತಾಂಶವನ್ನೇ ನೀಡಿದೆ.
ಏತನ್ಮಧ್ಯೆ, ಇರಾನಿನೊಂದಿಗಿನ ಅನಿಲ ಕೊಳವೆ ಒಪ್ಪಂದದ ಕುರಿತಾಗಿ ನಿರಾಸಕ್ತಿ ತೋರುತ್ತಿರುವ ಯುಪಿಎ ಸರಕಾರದ ಪ್ರವೃತ್ತಿಯ ಬಗ್ಗೆ ಟೀಕಿಸಿದ್ದ ಎಡಪಕ್ಷವು, ಕೇಂದ್ರದ ಈ ಧನಾತ್ಮಕ ಬೆಳವಣಿಗೆಯನ್ನು ಶ್ಲಾಘಿಸಿದ್ದರೂ, ಪರಮಾಣು ಒಪ್ಪಂದದ ಕುರಿತಾದ ತಮ್ಮ ದೃಢ ನಿಲುವನ್ನು ಮೆದುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
|