"ಹಣದುಬ್ಬರ, ಭಾರತ-ಅಮೆರಿಕ ಅಣುಒಪ್ಪಂದಗಳಿಂದಾಗಿ ಕೇಂದ್ರವು ಮುಜುಗರದ ಪರಿಸ್ಥಿತಿಯನ್ನೆದುರಿಸುತ್ತಿದೆ. ಅಲ್ಲದೆ ಪ್ರಧಾನಿ ಮನಮೋಹನ್ ಸಿಂಗ್ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಮತ್ತು ಮಿತ್ರಪಕ್ಷಗಳು ಪರಸ್ಪರ ವಿಶ್ವಾಸ ಹೊಂದಿಲ್ಲ" ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಯುಪಿಎ ಸರಕಾರವು ಅಲ್ಪಸಂಖ್ಯಾತವಾಗುತ್ತಿದ್ದರೂ ಅದು ಚುನಾವಣೆಯಿಂದ ದೂರಸರಿಯಲಿಚ್ಛಿಸುತ್ತಿದೆ, ಬಿಎಸ್ಪಿಯು ಕೇಂದ್ರದ ಯುಪಿಎ ಸರಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಂಡಿರುವ ಕಾರಣ ಅದು ಅಲ್ಪಸಂಖ್ಯಾತವಾಗಿದೆ. ಆದರೂ ಅದು ಚುನಾವಣೆಯಿಂದ ದೂರವಿರಲು ಇಚ್ಛಿಸುತ್ತಿದೆ ಎಂದು ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ಬಿಜೆಪಿಗೆ ಚುನಾವಣೆಯ ಅವಸರವಿಲ್ಲದಿದ್ದರೂ ಅದು ಯಾವುದೇ ಕ್ಷಣದಲ್ಲೂ ಚುನಾವಣೆ ಎದುರಿಸಲು ಸಿದ್ಧವಾಗಿದೆ ಎಂದು ಅವರು ನುಡಿದರು.
ಅಗತ್ಯವಸ್ತುಗಳ ಬೆಲೆ ಏರಿಕೆಗೆ ಜಾಗತಿಕವಾಗಿ ಬೆಲೆಏರಿಕೆ ಕಾರಣ ಎಂಬ ಸಮರ್ಥನೆಯನ್ನು ಪ್ರಸ್ತಾಪಿಸಿದ ನಾಯ್ಡು, ಮಲೇಷ್ಯಾ, ಇಟಲಿ, ಫ್ರಾನ್ಸ್‌ಗಳಂತಹ ರಾಷ್ಟ್ರಗಳಲ್ಲಿ ಹಣದುಬ್ಬರ ಶೇ.3-4 ಇದೆ ಎಂಬುದನ್ನು ಬೆಟ್ಟು ಮಾಡಿದರು.
ಅಣುಒಪ್ಪಂದಕ್ಕೆ ಸಹಿ ಹಾಕುವ ವಿಚಾರದಲ್ಲಿ ಕೇಂದ್ರವು ಅಲ್ಪಸಂಖ್ಯಾತರನ್ನು ತುಷ್ಠೀಕರಿಸಲು ಯತ್ನಿಸುತ್ತಿದೆ. ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದಲ್ಲಿ ಮುಸ್ಲಿಮರು ಕೋಪಗೊಂಡಾರೆಂಬುದು ಕೇಂದ್ರದ ಚಿಂತೆಯಾಗಿದೆ. ಕೇಂದ್ರವು ರಾಜಕೀಯ ಲಾಭಗಳನ್ನು ತನ್ನ ಮನದಲ್ಲಿರಿಸಿದಯೇ ಹೊರತು ರಾಷ್ಟ್ರದ ಹಿತಾಸಕ್ತಿಯನ್ನಲ್ಲ ಎಂದು ಅವರು ಟೀಕಿಸಿದರು.
ನವದೆಹಲಿಯಲ್ಲಿ ಜೂನ್ 26ರಂದು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯು ಸಭೆ ಸೇರಲಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.
ಚುನಾವಣಾ ತಯಾರಿಗಾಗಿ, ನಾಯಕನ ಆಯ್ಕೆ, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ತಯಾರಿಗಳು, ಚುನಾವಣಾ ಪ್ರಚಾರ ಮತ್ತು ಚುನಾವಣಾ ಪ್ರಣಾಳಿಕೆಯ ಮಂಡನೆ- ಈ ಮೊದಲಾದ ಐದು ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದ ಅವರು, ಈ ಸೂತ್ರಗಳು ಗುಜರಾತ್ ಮತ್ತು ಕರ್ನಾಟಕಗಳಲ್ಲಿ ಯಶಸ್ವಿಯಾಗಿರುವ ಕಾರಣ ಇದನ್ನೇ ಮುಂದುವರಿಸುವುದಾಗಿ ನುಡಿದರು.
|