500 ಮೆಗಾವಾಟ್ ಸಾಮರ್ಥ್ಯದ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಮಾಣಗೊಳ್ಳುತ್ತಿರುವ ಚೆನ್ನೈ ಸಮೀಪದ ಕಲ್ಪಾಕಂ ಇಂದಿರಾ ಗಾಂಧಿ ಅಣುಶಕ್ತಿ ಸಂಶೋಧನಾ ಕೇಂದ್ರದಲ್ಲಿ ಸುರಕ್ಷತಾ ಘಟಕವನ್ನು ಮಂಗಳವಾರ ಅಳವಡಿಸಲಾಯಿತು.
ಪರಮಾಣು ರಿಯಾಕ್ಟರ್‌ನ ಅತ್ಯಂತ ಪ್ರಮುಖ ಭಾಗ ಎಂದು ಪರಿಗಣಿಸಲ್ಪಟ್ಟಿರುವ 13.5 ಮೀಟರ್ ಅಗಲ, 13 ಮೀಟರ್ ಎತ್ತರ ಮತ್ತು 15 ಮಿಮೀ ದಪ್ಪವಿರುವ ಈ ಸೇಫ್ಟಿ ವೆಸೆಲನ್ನು ಅಣುಶಕ್ತಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ವಿನ್ಯಾಸಪಡಿಸಿದ್ದು, ಜರ್ಮನಿಯಿಂದ ತರಿಸಲಾಗಿದ್ದ 300 ಟನ್ ಸಾಮರ್ಥ್ಯದ ಕ್ರೇನ್ ಮೂಲಕ ರಿಯಾಕ್ಟರ್ ವಾಲ್ಟ್‌ನಲ್ಲಿ ಅಳವಡಿಸಲಾಯಿತು.
ಪ್ರಧಾನ ಫಾಸ್ಟ್ ಬ್ರೀಡರ್‌ನಲ್ಲಿ ಉತ್ಪತ್ತಿಯಾಗುವ 600 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಶಾಖವನ್ನು ಈ ರಿಯಾಕ್ಟರ್ ತಾಳಿಕೊಳ್ಳಬಹುದಾಗಿದ್ದು, ರಿಯಾಕ್ಟರ್‌ನೊಳಗೆ ಬಳಸಲಾಗುವ ಸೋಡಿಯಂ ದ್ರವದ ಸಂಭಾವ್ಯ ಸೋರಿಕೆಯ ಸಂದರ್ಭದಲ್ಲಿ ಇದು ಸುರಕ್ಷತಾ ಗೋಡೆಯಾಗಿಯೂ ವರ್ತಿಸುತ್ತದೆ.
ಈ ಸೇಫ್ಟಿ ವೆಸೆಲ್‌ನ ವಿಶೇಷತೆಯೆಂದರೆ, ಇದರ ಶಾಖ ಸಹಿಷ್ಣುತೆ ಸಾಮರ್ಥ್ಯ. ಅದು +/- 12ರ ಮಟ್ಟದಲ್ಲಿದ್ದು, ವಿಶ್ವ ದರ್ಜೆಗೆ ಹೋಲಿಸಿದರೆ ಇದು ಅತ್ಯಧಿಕ. 140 ಟನ್ ತೂಕದ ಈ ವೆಸೆಲ್ ನಿರ್ಮಾಣಕ್ಕೆ ಸುಮಾರು 20 ಕೋಟಿ ರೂ. ವ್ಯಯಿಸಲಾಗಿದೆ.
ಈ ಸಂದರ್ಭ, ಅಣುಶಕ್ತಿ ಆಯೋಗದ ಅಧ್ಯಕ್ಷ ಡಾ.ಅನಿಲ್ ಕಾಕೋಡ್ಕರ್, ಕಲ್ಪಾಕಂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಬಲದೇವ್ ರಾಜ್ ಮತ್ತು ಚೆನ್ನೈನ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಭಾರತದ ಪ್ರಥಮ ಫಾಸ್ಟ್ ಬ್ರೀಡರ್ ಪ್ಲುಟೋನಿಯಂ ವಿದ್ಯುತ್ ಉತ್ಪಾದನಾ ಸ್ಥಾವರ ಇದಾಗಿದ್ದು, 2011ರ ವೇಳೆಗೆ ಕಾರ್ಯಾಚರಿಸಲಿದೆ. ಈಗಾಗಲೇ ಇಲ್ಲಿ ಯುರೇನಿಯಂ ಆಧಾರಿತ ವಿದ್ಯುತ್ ಸ್ಥಾವರವಿದ್ದು, ಮೊದಲ ಘಟಕವು 1984ರಿಂದಲೂ, ಎರಡನೇ ಘಟಕವು 1986ರಿಂದಲೂ ಕಾರ್ಯಾಚರಣೆಯಲ್ಲಿದೆ.
ಫಾಸ್ಟ್ ಬ್ರೀಡರ್ ರಿಯಾಕ್ಟರುಗಳೆಂದರೆ, ಅತ್ಯಂತ ಸಮರ್ಥ ಮತ್ತು ಬಳಸಿಕೊಳ್ಳುವುದಕ್ಕಿಂತಲೂ ಹೆಚ್ಚು ವಿದಳನಶೀಲ ವಸ್ತುವನ್ನು ಉತ್ಪಾದಿಸುವ ಪ್ಲುಟೋನಿಯಂ ಆಧಾರಿತ ರಿಯಾಕ್ಟರುಗಳು. ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್ ಮತ್ತು ಹಿಂದಿನ ಯುಎಸ್ಎಸ್ಆರ್ ಸೇರಿ, ಫಾಸ್ಟ್ ಬ್ರೀಡರ್ ಟೆಸ್ಟ್ ರಿಯಾಕ್ಟರ್ ತಂತ್ರಜ್ಞಾನ ಹೊಂದಿರುವ ಆರನೇ ರಾಷ್ಟ್ರವಾಗಿ ಭಾರತವು ಗುರುತಿಸಲ್ಪಟ್ಟಿದೆ.
|