ಮುಂಬೈ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮೂವರು ವಾರ್ಡ್‌ಬಾಯ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಉದ್ರಿಕ್ತ ಜನತೆ ಪ್ರತಿಭಟನೆ ನಡೆಸಿದರು.
ಸುಟ್ಟಗಾಯಗಳಿಂದ ಬಳಲುತ್ತಿದ್ದ 16 ಮತ್ತು 23ರ ಹರೆದ ಇಬ್ಬರು ಹುಡುಗಿಯರು ಕಳೆದ ಭಾನುವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಮುಂಬೈನ ಬೆಂಡಿ ಬಜಾರಿನಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅಪಘಾತದ ವೇಳೆ ಗಾಯಗೊಂಡ ಅವರನ್ನು ಮಸೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇವರ ಬ್ಯಾಂಡೇಜುಗಳನ್ನು ಬದಲಿಸುವ ವೇಳೆಗೆ ಈ ಮೂವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಈ ಹುಡುಗಿಯರ ಕುಟುಂಬದವರು ದೂರಿದ್ದಾರೆ.
"ಪಾನಮತ್ತರಾಗಿದ್ದ ಈ ವಾರ್ಡ್‌ಬಾಯ್‌ಗಳು ಅನವಶ್ಯವಕವಾಗಿ ತನ್ನ ಸಹೋದರಿಯರ ಅಂಗಾಂಗಗಳನ್ನು ಸ್ಪರ್ಷಿಸಿದರು. ತನ್ನ ಸಹೋದರಿಯರು ಪ್ರತಿಭಟಿಸಿದರೂ ಅವರು ತಮ್ಮ ಕುಕೃತ್ಯವನ್ನು ನಿಲ್ಲಿಸಿಲ್ಲ" ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವತಿಯರ ಸಹೋದರ ಮೊಹಮ್ಮದ್ ನದೀಮ್ ಹೇಳಿದ್ದಾರೆ.
ಈ ಕುರಿತು ಆಸ್ಪತ್ರೆಯ ಆಡಳಿತವು, ತಮ್ಮ ಸಿಬ್ಬಂದಿಗಳು ಪಾನಮತ್ತರಾಗಿದ್ದರು ಎಂಬ ದೂರನ್ನು ತಳ್ಳಿಹಾಕಿದ್ದಾರೆ. ಆ ವಾರ್ಡ್‌ಬಾಯ್‌ಗಳು ಹೆಸರು ಕೇಳಿದಾಗ 'ಗೊತ್ತಿಲ್ಲ' ಎಂದು ಆಸ್ಪತ್ರೆಯ ಅಧಿಕಾರಿಗಳು ಉತ್ತರಿಸಿರುವುದರಿಂದ ಕೆರಳಿದ ಜನತೆ ಆಸ್ಪತ್ರೆಯ ಮುಖ್ಯಸ್ಥರ ಮೇಲೆ ದಾಳಿ ನಡೆಸಿ ಆಸ್ಪತ್ರೆಯ ಆಸ್ತಿಗೆಯನ್ನ ಹಾನಿಗೊಳಿಸಿದ್ದಾರೆ.
ಉದ್ರಿಕ್ತ ಜನತೆಯನ್ನು ನಿಯಂತ್ರಿಸಲು ಸ್ಥಳದಲ್ಲಿ ಆರು ಪೊಲೀಸ್ ವ್ಯಾನುಗಳನ್ನು ನಿಯೋಜಿಸಲಾಗಿದೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರ ಹುಡುಕಾಟ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸದಾನಂದ ದಾಟೆ ಹೇಳಿದ್ದಾರೆ. ಆದರೆ, ಈ ಉತ್ತರದಿಂದ ಬಲಿಪಶುಗಳ ಮನೆಯವರು ಸಂತುಷ್ಟರಾಗಿಲ್ಲ.
|