ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯಕ್ಕಾಗಿ ಚಳುವಳಿ ಹೂಡಿರುವ ಗೂರ್ಖ ಜನಮುಕ್ತಿ ಮೋರ್ಚ(ಜಿಜೆಎಮ್) ಮತ್ತು ಪಶ್ಚಿಮ ಬಂಗಾಳ ಸರಕಾರಗಳ ನಡುವೆ ಕಲ್ಕತ್ತದಲ್ಲಿ ಬುಧವಾರದಂದು ಮಾತುಕತೆ ನಡೆಯಲಿರುವುದಾಗಿ ನಿರೀಕ್ಷಿಸಲಾಗಿದೆ.
"ಅವರು ನಾಳೆ ಬರುವರೆಂದು ತಿಳಿದು ಬಂದಿದೆ, ಆದ್ದರಿಂದ ಮಾತುಕತೆಯು ನಾಡಿದ್ದು (ಜೂನ್25)ನಡೆಯಲಿದೆ" ಎಂದು ಪತ್ರಕರ್ತರಿಗೆ ತಿಳಿಸಿದ್ದ ಮುಖ್ಯ ಕಾರ್ಯದರ್ಶಿ ಅಮಿತ್ ಕುಮಾರ್ ದೇವ್ ಅವರು ಇತರ ಯಾವುದೇ ಮಾಹಿತಿ ನೀಡಿರಲಿಲ್ಲ.
ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ಅವರು ಜಿಜೆಎಮ್ ಮುಖ್ಯಸ್ಥ ಬಿಮಲ್ ಗುರುಂಗ್ ಅವರನ್ನು ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ಮಾತುಕತೆಗೆ ಆಹ್ವಾನಿಸಿದ ಒಂದು ವಾರದ ಬಳಿಕ ಈ ಮಾತುಕತೆಯು ಕಾರ್ಯಗತಗೊಳ್ಳಲಿದೆ.
ಏತನ್ಮಧ್ಯೆ, ನವದೆಹಲಿಯಲ್ಲಿ ತ್ರಿಪಕ್ಷೀಯ ಮಾತುಕತೆಯನ್ನು ನಡೆಸುವಂತೆ ಮುಖ್ಯಮಂತ್ರಿಗಳ ಸಹಾಯ ಕೇಳಲು ಹಿರಿಯ ನಾಯಕರ ತಂಡವೊಂದನ್ನು ಕೋಲ್ಕತಾಗೆ ಕಳಿಸಲು ಮೋರ್ಚವು ತೀರ್ಮಾನಿಸಿದೆ ಎಂದು ಜಿಜೆಎಮ್‌ನ ಪತ್ರಿಕಾ ಕಾರ್ಯದರ್ಶಿ ಬಿನಾಯ್ ತಮಂಗ್ ಡಾರ್ಜಿಲಿಂಗ್‌ನಲ್ಲಿ ಹೇಳಿದ್ದಾರೆ.
ಮಾತುಕತೆಗೆ ಸಂಭಂದಿಸಿದಂತೆ ಸರಕಾರದಿಂದ ಯಾವುದೆ ಆಧೀಕೃತ ಮಾಹಿತಿ ಪಡೆದಿರುವಿರಾ ಎಂಬ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ ತಮಂಗ್, ಆದರೆ ಕೆಲವು ಮೂಲಗಳಿಂದ ಮಾತುಕತೆಯು ಜೂನ್ 25 ರಂದು ಏರ್ಪಡಲಿದೆ ಎಂದು ನಮಗೆ ತಿಳಿದು ಬಂದಿದೆ ಎಂದು ತಿಳಿಸಿದರು.
ಅವರು ನಾಲ್ಕು ಸದಸ್ಯರ ನಿಯೋಗವು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಿದೆ ಎಂದು ಹೇಳಿದರು. ಕೇಂದ್ರವನ್ನೊಳಗೊಂಡಂತೆ ತ್ರಿಪಕ್ಷೀಯ ಮಾತುಕತೆ ನಡೆಸಲು ನಿಯೋಗವು ಮುಖ್ಯಮಂತ್ರಿಗಳ ಸಹಾಯ ಕೇಳಲಿರುವುದಾಗಿ ತಮಂಗ್ ಮತ್ತು ಇನ್ನೋರ್ವ ಜಿಜೆಎಮ್ ಕೇಂದ್ರ ಸಮಿತಿ ಸದಸ್ಯ ಡಿ.ಕೆ. ಪ್ರಧಾನ್ ತಿಳಿಸಿದರು.
|