ಅಣು ಒಪ್ಪಂದ ಕುರಿತು ಯುಪಿಎ ಸರಕಾರ ಮತ್ತು ಎಡಪಕ್ಷಗಳ ನಡುವಿನ ಮಾತುಕತೆಯಲ್ಲಿ, ಎಡಪಕ್ಷಗಳು ತಮ್ಮ ಪಟ್ಟು ಸಡಿಲಿಸದ ಕಾರಣ ಯಾವುದೇ ಪ್ರಗತಿ ಕಂಡು ಬಂದಿಲ್ಲ.
ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ತಮ್ಮ ಬಿಗಿನಿಲುವು ಬಿಟ್ಟು ಕೊಡದ ಕಾರಣ, ಎಡಪಕ್ಷಗಳ ಮನಒಲಿಸಲು ಯುಪಿಎ ನಡೆಸಿದ ಪ್ರಯತ್ನಗಳು ಫಲಕಾರಿಯಾಗಲಿಲ್ಲ.
ಸಿಪಿಐ-ಎಂ ನಾಯಕ ಪ್ರಕಾಶ್ ಕಾರಟ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಬುಧವಾರ ಮುಂಜಾನೆ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ರಕ್ಷಣಾ ಸಚಿವ ಎ.ಕೆ. ಆಂಟನಿಯವರೂ ಉಪಸ್ಥಿತರಿದ್ದರು. ಮಾತುಕತೆಯ ವೇಳೆ ಐಎಇಎ ಸುರಕ್ಷತಾ ಒಪ್ಪಂದಕ್ಕೆ ಸರಕಾರ ಸಹಿಹಾಕಲು ತನ್ನ ಪಕ್ಷವು ಅನುಮತಿ ನೀಡುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.
ಅಲ್ಲದೆ, ಈ ವಿವಾದಾಸ್ಪದ ಒಪ್ಪಂದದಲ್ಲಿ ಮುಂದುವರಿಯಲು ಯುಪಿಎ ಸರಕಾರ ನಿರ್ಧರಿಸಿದಲ್ಲಿ ಎಡಪಕ್ಷಗಳು ಬೆಂಬಲ ಹಿಂಪಡೆಯಲಿವೆ ಎಂದು ಕಾರಟ್ ಸಭೆಯಲ್ಲಿ ಸ್ಪಷ್ಟಪಡಿಸಿದರು.
ಸಭೆಯ ಬಳಿಕ ಕಾರಟ್, ಮುಖರ್ಜಿ ಮತ್ತು ಆಂಟನಿ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ನಿವಾಸಕ್ಕೆ ತೆರಳಿ ಎಡಪಕ್ಷಗಳ ನಿಲುವನ್ನು ತಿಳಿಸಿದರು. ಏತನ್ಮಧ್ಯೆ ಕಾರಟ್ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿದರು. ಯಾದವ್ ಅವರು ಮುಂದಿನ ವಾರದ ಯುಎನ್‌ಪಿಎ ಸಭೆಯ ಬಳಿಕ ತಮ್ಮ ಪಕ್ಷವು ನಿರ್ಧಾರ ಕೈಗೊಳ್ಳಲಿದೆ ಎಂದು ಪುನರುಚ್ಚರಿಸಿದ್ದಾರೆ.
ಅಣು ಒಪ್ಪಂದ ಕುರಿತು ಭವಿಷ್ಯದ ಕ್ರಮಗಳ ಕುರಿತು ಯುಪಿಎ-ಎಡಪಕ್ಷಗಳ ಸಮನ್ವಯ ಸಮಿತಿ ಸಭೆಗೆ ಮುಂಚಿತವಾಗಿ ನಡೆದ ಈ ಸಭೆಯಲ್ಲಿನ ಬೆಳವಣಿಗೆಗಳು ಮುಂದಿನ ಬೆಳವಣಿಗೆಗಳ ಸುಳಿವು ನೀಡಿವೆ.
|