ಲಕ್ನೋ ಅಭಿವೃದ್ಧಿ ಪ್ರಾಧಿಕಾರವು ತೆಗೆದುಹಾಕಿದ ಬೇಲಿಯನ್ನು ಮರುಸ್ಥಾಪಿಸಲು ಸಹರಾ ಬಳಗಕ್ಕೆ ಅನುಮತಿ ನೀಡುವ ಮೂಲಕ ಸಹರಾ ಸಹೇರ್ ಕುರಿತು ಸಲ್ಲಿಸಲಾಗಿರುವ ದೂರಗಳನ್ನು ಸುಪ್ರೀಂಕೋರ್ಟ್ ಬುಧವಾರ ಇತ್ಯರ್ಥಗೊಳಿಸಿದೆ.
ಸಹರಾ ಸಹೆರ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 23ರಂದು ಯತಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಲಕ್ನೋ ಅಭಿವೃದ್ಧಿ ಪ್ರಾಧಿಕಾರವು, ಸಹರಾ ಯೋಜನಾ ಜಾಗದಲ್ಲಿ ಹಾಕಲಾಗಿದ್ದ ತಗಡು ಬೇಲಿಯನ್ನು ಧ್ವಂಸ ಮಾಡಿರುವ ಪ್ರಕರಣದ ಕುರಿತು ಲಕ್ನೋ ಪ್ರಾಧಿಕಾರ ಮತ್ತು ಸಹರಾ ಕಂಪೆನಿಗಳು ಪರಸ್ಪರರ ವಿರುದ್ಧ ನಿಂದನಾ ದೂರುಗಳನ್ನು ದಾಖಲಿಸಿದ್ದವು.
ಸಹರಾ ಸಹೆರ್ ಕಟ್ಟಡ ಧ್ವಂಸಕ್ಕೆ ತಡೆಯಾಜ್ಞೆ ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ಮಧ್ಯಂತರ ಆಜ್ಞೆಯ ವಿರುದ್ಧ ಉತ್ತರ ಪ್ರದೇಶ ಸರಕಾರ ಸಲ್ಲಿಸಿರುವ ಮೇಲ್ಮನವಿಯನ್ನೂ ಸುಪ್ರೀಂಕೋರ್ಟ್ ಇದರೊಂದಿಗೆ ವಿಲೇವಾರಿ ಮಾಡಿದೆ.
ಅದಾಗ್ಯೂ, ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟಿಗೆ ನಿರ್ದೇಶನ ನೀಡಿದೆ.
ತಡೆಬೇಲಿಯ ನಿರ್ಮಾಣವು ಜೂನ್ 28 ಮತ್ತು 29ರಂದು ಹಿರಿಯ ನ್ಯಾಯವಾದಿ ಎಲ್.ನಾಗೇಶ್ವರ ರಾವ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ರಾವ್ ಅವರನ್ನು ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದು, ಅವರು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠದ ರಿಜಿಸ್ಟ್ರಾರ್ ಅವರಿಗೆ ವರದಿ ಸಲ್ಲಿಸಲಿದ್ದಾರೆ.
|