ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ(ಐಎಇಎ)ಯೊಂದಿಗೆ ಒಪ್ಪಂದಕ್ಕೆ ಮುಂದಾದರೆ ಸರಕಾರ ಅಪಾಯಕ್ಕೆ ಸಿಲುಕಲಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ದನ್ ಹೇಳಿದ್ದಾರೆ.
ಸರಕಾರವು ಸುಭದ್ರವಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು "ಸರಕಾರವು ಸುಭದ್ರವಾಗಿದೆ. ಆದರೆ ಅವರು ಅವರಾಗಿಯೇ ಅದನ್ನು ಅಸ್ಥಿರಗೊಳಿಸಿಕೊಳ್ಳುತ್ತಾರೊ ಎಂದು ತನಗೆ ತಿಳಿದಿಲ್ಲ. ಅವರು ಐಎಇಎ ಒಪ್ಪಂದದಲ್ಲಿ ಮುಂದುವರಿದದ್ದೇ ಆದಲ್ಲಿ ಸರಕಾರ ಸುರಕ್ಷಿತವಾಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುಪಿಎಯ ಮಿತ್ರಪಕ್ಷಗಲು ನೀಡಿರುವ ಭರವಸೆಯನ್ನು ಅವರು ತಳ್ಳಿಹಾಕಿದ್ದಾರೆ. ಸಹಜವಾಗಿ ಅವರೂ ಚಿಂತಿತರಾಗಿದ್ದಾರೆ. ಅವರಿಗೆ ಸಾಧ್ಯವಿರುವುದನ್ನು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ನೀಡುವ ಗ್ಯಾರಂಟಿಯು ಸರಕಾರಕ್ಕೆ ಬಾಧ್ಯವಾಗುವುದಿಲ್ಲ. ಅವರು ಸಹಪಕ್ಷಗಳಷ್ಟೆ" ಎಂದು ಎಡಪಕ್ಷಗಳ ನಾಯಕ ನುಡಿದರು.
ಪ್ರಧಾನಿ ಮನಮೋಹನ್ ಸಿಂಗ್ ಸರಕಾರದ ಮುಖ್ಯಸ್ಥ ಮತ್ತು ಸೊನಿಯಾ ಮೈತ್ರಿಕೂಟದ ಮುಖ್ಯಸ್ಥೆ. ಹಾಗಾಗಿ ಅವರುಗಳು ಸ್ಪಷ್ಟನೆ ನೀಡದೆ ಇನ್ಯಾರೇ ನೀಡುವ ಯಾವುದೇ ಭರವಸೆಗಳು ಯಾವುದೇ ಬದಲಾವಣೆಯುಂಟುಮಾಡುವುದಿಲ್ಲ" ಎಂದು ನುಡಿದರು.
|