ಭ್ರಷ್ಟಾಚಾರದಲ್ಲಿ ವಿಶ್ವದ 180 ರಾಷ್ಟ್ರಗಳಲ್ಲಿ ಭಾರತ 74ನೆ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಷ್ಟ್ರವು ಎರಡು ಅಂಕಗಳಷ್ಟು ಕೆಳಗಿಳಿದಿದೆ.
ಆದರೆ ನಮ್ಮ ನೆರೆರಾಷ್ಟ್ರ ಸಾಂಪ್ರದಾಯಿಕ ವೈರಿ ಪಾಕಿಸ್ತಾನವು ಈ ವಿಚಾರದಲ್ಲಿ 'ಉನ್ನತ' ಸ್ಥಾನದಲ್ಲಿದೆ. ಪಾಕಿಸ್ತಾನವು 140ನೆ ಸ್ಥಾನದಲ್ಲಿದ್ದರೆ, ಇರಾನ್, ಲಿಬಿಯಾ ಮತ್ತು ನೇಪಾಳಗಳು ಅನುಕ್ರಮವಾಗಿ 133, 134 ಮತ್ತು 135ನೆ ಸ್ಥಾನಗಳನ್ನು ಗಳಿಸಿಕೊಂಡಿವೆ. ಅಂಕಿ ಅಂಶಗಳ ಪ್ರಕಾರ ರಷ್ಯ ಪಾಕಿಸ್ತಾನಕ್ಕಿಂತಲೂ ಒಂದು ಕೈ ಮುಂದಿದ್ದು, 145ನೆ ಸ್ಥಾನ ಗಳಿಸಿದೆ.
ಎಲ್ಲಾ ವಿಚಾರದಲ್ಲೂ ಭಾರತಕ್ಕೆ ನಿಕಟ ಸ್ಫರ್ಧೆಯೊಡ್ಡುವ ಚೀನ ಇಲ್ಲೂ ಭಾರತದ ಸನಿಹದಲ್ಲಿದ್ದು 72 ಸ್ಥಾನದಲ್ಲಿದೆ. ಭಾರತವು ಕಳೆದ ವರ್ಷ 72ನೆ ಸ್ಥಾನದಲ್ಲಿತ್ತು. ಶ್ರೀಲಂಕಾ 96 ಮತ್ತು ಮಾಲ್ಡೀವ್ಸ್ 90ನೆ ಸ್ಥಾನಗಳಲ್ಲಿವೆ.
ಇದ್ದುದರಲ್ಲಿ ಈ ಪ್ರಾಂತ್ಯದಲ್ಲಿ ಭೂತಾನ್‌ನಲ್ಲಿ ಅತ್ಯಂತ ಕಮ್ಮಿ ಭ್ರಷ್ಟಾಚಾರ ನಡೆಯುತ್ತಿದ್ದು, ಪಟ್ಟಿಯಲ್ಲಿ ಅದು 41ನೆ ಸ್ಥಾನಗಳಿಸಿದೆ.
ಡೆನ್ಮಾರ್ಕ್, ಫಿನ್ಲಾಂಡ್, ನ್ಯೂಜಿಲ್ಯಾಂಡ್, ಸಿಂಗಾಪುರ ಮತ್ತು ಸ್ವೀಡನ್‌ಗಳು ವಿಶ್ವದಲ್ಲಿಯೇ ಅತ್ಯಂತ ಕನಿಷ್ಠ ಭ್ರಷ್ಟಾಚಾರದ ರಾಷ್ಟ್ರಗಳಾಗಿದ್ದು, ಮೊದಲ ಐದು ಸ್ಥಾನಗಳನ್ನು ಹೊಂದಿದ್ದು, ಕಳೆದ ವರ್ಷದ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ. ಮ್ಯಾನ್ಮಾರ್ ಮತ್ತು ಸೊಮಾಲಿಯಗಳು ಪಟ್ಟಿಯ ಕೊನೆಯಲ್ಲಿವೆ.
ಅಮೆರಿಕ 20ನೆ ಸ್ಥಾನದಲ್ಲಿದ್ದರೆ, ಬ್ರಿಟನ್ 13ನೆ ಸ್ಥಾನದಲ್ಲಿದೆ.
ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ತಯಾರಿಸಿರುವ ಭ್ರಷ್ಟಾಚಾರ ಅರಿವು ಸೂಚ್ಯಂಕ ಈ ಅಂಕಿ ಅಂಶಗಳನ್ನು ನೀಡಿದೆ.
|