ಭಾರತ-ಅಮೆರಿಕ ಅಣುಒಪ್ಪಂದವನ್ನು ವಿರೋಧಿಸಿದಲ್ಲಿ, ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿರಿಸುವ ಎಡಪಕ್ಷಗಳ ರಾಜಕೀಯ ಕಾರ್ಯಸೂಚಿಯು ಈಡೇರಿದಂತಾಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
"ತಮ್ಮ ರಾಜಕೀಯ ಉದ್ದೇಶ ನೆರವೇರಿದೆ ಎಂದು ಅವರು ತಿಳಿದಿದ್ದರೆ ಅದು ತಪ್ಪು. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿರಿಸುವುದು ಅವರ ಕಾರ್ಯಸೂಚಿ. ಅವರು ತಮ್ಮ ಆಸಕ್ತಿಯನ್ನು ಕಾಯ್ದುಕೊಂಡಿದ್ದಾರೆಯೇ" ಎಂಬುದಾಗಿ ಇಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಮೊಯ್ಲಿ ನುಡಿದರು.
"ಈ ಒಪ್ಪಂದವು ಮುಂದಿನ ಎರಡು ದಶಕಗಳ ಕಾಲ ಭಾರತವನ್ನು ಅತ್ಯಂತ ಶಕ್ತರಾಷ್ಟ್ರವನ್ನಾಗಿಸಲಿದೆ" ಎಂದು ಅವರು ಅಭಿಪ್ರಾಯಿಸಿದರು.
ಒಪ್ಪಂದವು ವಿಳಂಬವಾಗುತ್ತಿರುವ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರು ಚಿಂತಿತರಾಗಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ "ಅಂತಹ ಸ್ವರೂಪದ ಒಪ್ಪಂದಕ್ಕೆ ಅಡ್ಡಿಯಾಗುತ್ತಿದೆ ಎಂದರೆ ಯಾವುದೇ ಪ್ರಧಾನಿಯಾದರೂ ಅಸಂತುಷ್ಟರಾಗುತ್ತಾರೆ. ಒಪ್ಪಂದದಲ್ಲಿ ಎಲ್ಲವೂ ನಮ್ಮ ಷರತ್ತುಗಳಿಗನುಗುಣವಾಗಿಯೇ ಇದೆ. ಇದು ಕಾಂಗ್ರೆಸ್‌ನ ಕಾರ್ಯಸೂಚಿಯಲ್ಲ. ಇದು ರಾಷ್ಟ್ರದ ಕಾರ್ಯಸೂಚಿ. ರಾಷ್ಟ್ರದ ಕಾರ್ಯಸೂಚಿಗೆ ಯುಪಿಎಯ ಬದ್ಧತೆ ಅತ್ಯಂತ ಸ್ಪಷ್ಟ" ಎಂದು ನುಡಿದರು.
ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯು ತನ್ನ ಸ್ವಾರ್ಥಕ್ಕಾಗಿ ಊಹಾಪೋಹದ ಪಾತ್ರವಹಿಸುತ್ತಿದೆ. ಇದು ಅತ್ಯಂತ ಬೇಜವಾಬ್ದಾರಿಯ ಕೃತ್ಯವಾಗಿದೆ. ಎನ್‌ಡಿಎ ಸರಕಾರ ಆಡಳಿತದಲ್ಲಿದ್ದಾಗ ಅಣುಒಪ್ಪಂದಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಇದನ್ನು ವಿರೋಧಿಸಲು ಕಾರಣವೇನು ಎಂದು ನುಡಿದರು.
ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ, ಜಂಟಿ ಯಂತ್ರದಿಂದ ಎಡಪಕ್ಷಗಳು ಹಿಂತೆಗೆಯುವ ತನಕ ಅವರು ಬೆಂಬಲ ಹಿಂತೆಗೆದುಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಮ್ಮೊಳಗೆ ಯಾವುದೇ ವಿವಾದವಿಲ್ಲ ಎಂದು ಅವರು ನುಡಿದರು.
ಯುಪಿಎ ಸರಕಾರ ಅವಧಿ ಪೂರೈಸಲಿದೆ ಮತ್ತು ಅಣುಒಪ್ಪಂದ ಜಾರಿಗೆ ಬರಲಿದೆ. ನಾವು ಸುಸ್ಥಿತಿಯಲ್ಲಿದ್ದೇವೆ ಮತ್ತು ಇದೇ ದೃಢತೆಯಲ್ಲಿ ನಾವು ಚುನಾವಣೆ ಎದುರಿಸಲಿದ್ದೇವೆ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
|