ನೋಯ್ಡಾದ ಅರುಶಿ ಮತ್ತು ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ|ಅನಿತಾ ದುರ್ರಾನಿ ಅವರ ಮನೆಗೆಲಸದ ಸಹಾಯಕ ರಾಜ್‌ಕುಮಾರ್ ತಪ್ಪಿಪ್ಪಿಕೊಂಡಿ ರುವುದಾಗಿ ಸಿಬಿಐ ಶನಿವಾರದಂದು ಗಾಜಿಯಾಬಾದ್ ನ್ಯಾಯಾಲಯಕ್ಕೆ ತಿಳಿಸಿದೆ. ಅರುಶಿ ಹತ್ಯೆ ಪ್ರಕರಣದಲ್ಲಿ ಭಾಗಿ ಎಂಬುದಾಗಿ ಒಪ್ಪಿಕೊಂಡಿರುವ ರಾಜ್‌ಕುಮಾರ್, ಅರುಶಿಯ ಮೊಬೈಲನ್ನು ಸ್ವಿಚ್ ಆಫ್ ಮಾಡಿ , ಅದನ್ನು ನಾಶ ಪಡಿಸಿರುವುದಾಗಿ ಸಿಬಿಐ ಅಧಿಕಾರಿಗಳು ಸಹಾಯಕ ಮ್ಯಾಜಿಸ್ಟ್ರೇಟ್ ಅವರಿಗೆ ತಿಳಿಸಿದ್ದಾರೆ. ಅಲ್ಲದೇ ಹೇಮರಾಜ್ ಮೊಬೈಲ್ ಪತ್ತೆ ಮತ್ತು ಜೋಡಿ ಕೊಲೆಗೆ ಬಳಸಿದ ಆಯುಧವನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳಿಗೆ ಸಹಾಯ ನೀಡಲು ಒಪ್ಪಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಅರುಶಿ ಕೊಲೆ ಪ್ರಕರಣದ ಸಿಬಿಐ ಹೇಳಿಕೆಯನ್ನು ಆಲಿಸಿದ ಬಳಿಕ ನ್ಯಾಯಾಲಯ ರಾಜ್‌ಕುಮಾರನನ್ನು 14ದಿನಗಳ ಕಾಲ ಸಿಬಿಐ ವಶಕ್ಕೊಪ್ಪಿಸಿದೆ. ಆದರೆ ಸಿಬಿಐ ಆತನನ್ನು 15ದಿನಗಳ ಕಾಲ ತಮ್ಮ ವಶಕ್ಕೊಪ್ಪಿಸಬೇಕೆಂದು ಕೋರ್ಟ್‌ಗೆ ಮನವಿ ಮಾಡಿತ್ತು. ಶುಕ್ರವಾರದಂದು ರಕ್ತ ಕಲೆ ಇದ್ದ ತೊಳೆದಿರುವ ಟಿ ಶರ್ಟ್‌ವೊಂದನ್ನು ಸಿಬಿಐ ವಶಕ್ಕೆ ತೆಗೆದುಕೊಂಡ ನಂತರ ರಾಜ್‌ಕುಮಾರನನ್ನು ಬಂಧಿಸಿತ್ತು. ಈ ಶರ್ಟನ್ನು ಅನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅದು ಮನುಷ್ಯನ ರಕ್ತ ಎಂಬುದು ಖಚಿತಪಟ್ಟಿತ್ತು. ಜೂನ್ 13ರಂದು ರಾಜ್‌ಕುಮಾರ್ ಮನೆಯಲ್ಲಿ ಈ ಟಿ ಶರ್ಟನ್ನು ವಶಪಡಿಸಿಕೊಂಡಿರುವುದಾಗಿ ಸಿಬಿಐ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದು, ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ಕುಮಾರನನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು ಎಂದು ತಿಳಿಸಿದರು.
|