ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತಾದ ತನ್ನ ದೃಢ ನಿಲುವನ್ನು ಎಡಪಕ್ಷವು ಸಡಿಲಿಸುವುದಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದು, ಎಡಪಕ್ಷಗಳ ವಿರೋಧದೊಂದಿಗೆ ಯುಪಿಎ ಸರಕಾರವು ಒಪ್ಪಂದವನ್ನು ಮುಂದುವರಿಸಿದಲ್ಲಿ ಎಡಪಕ್ಷಗಳು ತಮ್ಮ ಬೆಂಬಲವನ್ನು ಹಿಂತೆಗೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಮುಂಜಾನೆ ದೆಹಲಿಯಲ್ಲಿ ನಡೆದ ಎಡಪಕ್ಷಗಳ ನಿರ್ಣಾಯಕ ಸಭೆಯಲ್ಲಿ ಅಣುಒಪ್ಪಂದಕ್ಕೆ ಬೆಂಬಲ ನೀಡಲು ಸಾಧ್ಯವೇ ಇಲ್ಲ ಎಂಬುದಾಗಿ ಎಡಪಕ್ಷವು ಪುನರುಚ್ಛಿರಿಸಿತ್ತು.
ಅಣು ಒಪ್ಪಂದವನ್ನು ಯುಪಿಎ ಸರಕಾರವು ಮುಂದುವರಿಸಿದಲ್ಲಿ ಎಡಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳಲಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾತುಕತೆಯಿಲ್ಲ.
ಒಂದು ವೇಳೆ ಬುಷ್‌ನೊಂದಿಗೆ ಮಾತು ಉಳಿಸಿಕೊಡುವುದಕ್ಕಾಗಿ ಯುಪಿಎ ಸರಕಾರವು ಒಪ್ಪಂದವನ್ನು ಮುಂದುವರಿಸಿದರೆ, ಇದು ದೇಶದ ಸ್ವತಂತ್ರ ವಿದೇಶ ನೀತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾರಟ್ ಎಚ್ಚರಿಕೆ ನೀಡಿದ್ದಾರೆ.
ದೇಶವು ಹಣದುಬ್ಬರ ಮತ್ತು ಬೆಲೆ ಏರಿಕೆ ಬಿಸಿಯಿಂದ ತತ್ತರಿಸುತ್ತಿರುವಾಗ, ಪರಮಾಣು ಒಪ್ಪಂದವನ್ನು ಮುಂದುವರಿಸುವ ಯುಪಿಎ ಸರಕಾರದ ನಿರ್ಧಾರವು ನಿಜವಾಗಿಯೂ ವಿಲಕ್ಷಣವಾಗಿದೆ ಎಂದು ಕಾರಟ್ ಹೇಳಿದ್ದಾರೆ.
ಕೇವಲ ಕೇಂದ್ರದಲ್ಲೇ ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗಿಲ್ಲ ಎಂಬುದು ಕಾಂಗ್ರೆಸ್ ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
|