ಅಮರನಾಥ ಯಾತ್ರಾರ್ಥಿಗಳಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುವುದು ಎಂಬುದಾಗಿ ಜಮ್ಮು ಕಾಶ್ಮೀರ ಸರಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅಮರನಾಥ ಮಂದಿರ ಮಂಡಳಿಯು 39.88 ಹೆಕ್ಟೇರ್ ಜಾಗದ ಹಕ್ಕುಸ್ಥಾಪನೆಯನ್ನು ಕೈಬಿಟ್ಟಿದೆ.
ಮಂದಿರದ ಮಂಡಳಿಯ ಅಧ್ಯಕ್ಷರಾಗಿರುವ ರಾಜ್ಯಪಾಲ ಎನ್.ಎನ್.ವೋರಾ ಅವರು ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಅವರಿಗೆ ಪತ್ರ ಬರೆದಿದ್ದು, ಯಾತ್ರಿಗಳ ಸರ್ವ ಹಿತಾಸಕ್ತಿಯನ್ನು ಕಾಪಾಡಲು ಸರಕಾರವು ಬದ್ಧವಾಗಿರುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಯಾತ್ರಿಗಳಿಗೆ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಕೋರಲಾಗಿದ್ದ ಅರಣ್ಯಭೂಮಿಯ ವಿನಂತಿಯನ್ನು ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಅಮರನಾಥ ಯಾತ್ರಿಗಳಿಗೆ ಭದ್ರತೆ ಹಾಗೂ ಎಲ್ಲಾ ಸೌಕರ್ಯಗಳನ್ನು ಸರಕಾರ ಒದಗಿಸುವುದೇ ಎಂಬುದಾಗಿ ವೋರಾ ಅವರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅಜಾದ್ ಯಾತ್ರಾರ್ಥಿಗಳ ರಕ್ಷಣೆಗೆ ಸರಕಾರ ಸಂಪೂರ್ಣ ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಸರಕಾರವು, ಮಂದಿರ ಮಂಡಳಿಗಿಂತ ಉತ್ತಮವಾದ ಮತ್ತು ದೊಡ್ಡ ಮಟ್ಟದಲ್ಲಿ ಸೌಕರ್ಯಗಳನ್ನು ಒದಗಿಸಲು ಶಕ್ತವಾಗಿದೆ ಎಂದು ಮುಖ್ಯಮಂತ್ರಿ ಅಜಾದ್ ವರದಿಗಾರರಿಗೆ ತಿಳಿಸಿದ್ದಾರೆ.
ಮಂದಿರದ ಮಂಡಳಿಗೆ ಅರಣ್ಯ ಭೂಮಿಯ ನೀಡುವಿಕೆಯನ್ನು ವಿರೋಧಿಸಿ ಕಳೆದೊಂದು ವಾರದಿಂದ ಜಮ್ಮುವಿನಲ್ಲಿ ತೀವ್ರ ಪ್ರತಿಭಟನೆ ನಡೆದಿದೆ. ಈ ಮಧ್ಯೆ, ಇದೇ ವಿಚಾರಕ್ಕಾಗಿ ಜಮ್ಮು ಕಾಶ್ಮೀರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಪಿಡಿಪಿ ಪಕ್ಷ ಶನಿವಾರ ಹಿಂತೆಗೆದುಕೊಂಡಿತ್ತು.
|