ಭಾರತ-ಅಮೆರಿಕ ಅಣು ಒಪ್ಪಂದ ಕಾರ್ಯಗತವಾಗುವ ಮುನ್ನ ಸಂಸತ್ತನ್ನು ಎದುರಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿರುವ ಹೇಳಿಕೆಯು ತನ್ನ ಮೇಲೆ ಯೂವುದೇ ಪ್ರಭಾವ ಬೀರಿಲ್ಲ ಎಂದು ಹೇಳಿರುವ ಸಿಪಿಐ(ಎಂ), ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.
ಪ್ರಧಾನಿಯವರ ಭರವಸೆಯಲ್ಲಿ ಹೊಸದೇನೂ ಇಲ್ಲ. ಆದರೆ ನಮ್ಮ ನಿಲುವು ಸುಸ್ಪಷ್ಟ ಎಂಬುದಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಪ್ರಧಾನಿಯವರ ಹೇಳಿಕೆ ಹೊರಬಿದ್ದ ತಕ್ಷಣ ಪ್ರತಿಕ್ರಿಯಿಸಿದ್ದಾರೆ.
ಸರಕಾರವು ಅಣುಒಪ್ಪಂದ ಜಾರಿಯ ಉಪಕ್ರಮಕ್ಕೆ ಮುಂದಾಗುತ್ತಲೇ ಬೆಂಬಲ ಹಿಂತೆಗೆಯಲು ಸಿಪಿಐ-ಎಂ ಪಕ್ಷದ ಪಾಲಿಟ್‌ಬ್ಯೂರೋ ಸಭೆಯು ಭಾನುವಾರ ನಿರ್ಧರಿಸಿದೆ.
ಹಿರಿಯ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಐಎಇಎ ಮತ್ತು ಎನ್‌ಎಸ್‌ಜಿ ಒಪ್ಪಂದದಲ್ಲಿ ಮುಂದುವರಿಯಲು ಒಪ್ಪಿಗೆಗೆ ಕಾಯುತ್ತಿರುವುದಾಗಿ ಹೇಳಿರುವ ಸಿಂಗ್ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಒಪ್ಪಂದವು ಕಾರ್ಯಾಚರಣೆಗಿಳಿಯುವ ಮುನ್ನ ಸಂಸತ್ತಿನ ಅಂಗೀಕಾರ ಪಡೆಯುವುದಾಗಿ ಹೇಳಿದ್ದರು.
ಎಡಪಕ್ಷಗಳ ನಿಲುವಿನಲ್ಲಿ ಯಾವುದೇ ಹೊಸ ಬದಲಾವಣೆ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದಕ್ಕೆ ಪ್ರತಿಯಾಗಿ, ಪ್ರಧಾನಿ ನಿಲುವಿನಲ್ಲೂ ಹೊಸದೇನೂ ಇಲ್ಲ ಎಂದು ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಮ ಯಚೂರಿ ಹೇಳಿದ್ದಾರೆ.
|