ವಿವಾದ ಕೇಂದ್ರ ಬಿಂದುವಾಗಿರುವ ಅಮರನಾಥ್ ದೇವಾಲಯ ಮಂಡಳಿಗೆ ನೀಡಿರುವ ಅರಣ್ಯಭೂಮಿ ವರ್ಗಾವಣೆ ಆದೇಶವನ್ನು ಜಮ್ಮು-ಕಾಶ್ಮೀರ ಸಂಪುಟವು ಮಂಗಳವಾರ ರದ್ದುಗೊಳಿಸಿ, ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಿದೆ. ಅಮರನಾಥ್ ದೇವಾಲಯ ಅಡಳಿತ ಮಂಡಳಿಗೆ 39.88ಹೆಕ್ಟೇರ್ ಅರಣ್ಯಭೂಮಿಯನ್ನು ನೀಡಿರುವುದನ್ನು ಆಡಳಿತರೂಢ ಮೈತ್ರಿಕೂಟದ ಅಂಗಪಕ್ಷವಾಗಿದ್ದ ಪಿಡಿಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆದಿದೆ. ಇದಲ್ಲದೆ ವಿವಿಧ ಸಂಘಟನೆಗಳು ಅರಣ್ಯ ಭೂಮಿ ವರ್ಗಾವಣೆಯನ್ನು ವಿರೋಧಿಸಿದ್ದವು.
ಅಮರನಾಥ ಯಾತ್ರಿಕರಿಗೆ ಉತ್ತಮ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಅರಣ್ಯ ಭೂಮಿ ಹಸ್ತಾಂತರಕ್ಕೆ ನಿರ್ಧರಿಸಲಾಗಿದ್ದು, ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಇದೀಗ ಸರಕಾರವೇ ಯಾತ್ರಿಕರಿಗೆ ಉತ್ತಮ ಸೌಲಭ್ಯ ನೀಡುವುದಾಗಿ ಹೇಳಿದೆ. ಆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂನಬಿ ಅಜಾದ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಆದೇಶವನ್ನು ವಾಪಸು ಪಡೆದಿರುವುದಾಗಿ ಮೂಲಗಳು ತಿಳಿಸಿದೆ.
|