ಸರಕು ಸಾಗಣೆ ವಾಹನಗಳಿಗೆ ಸೇವಾ ತೆರಿಗೆ ವಿಧಿಸುವುದನ್ನು ವಿರೋಧಿಸಿ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಕರೆ ನೀಡಿರುವ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಮಂಗಳವಾರ ಮಧ್ಯರಾತ್ರಿಯಿಂದ ಆರಂಭವಾಗಿದ್ದು,ಏತನ್ಮಧ್ಯೆ ಸರಕಾರದೊಂದಿಗೆ ನಡೆಸಿದ ಮಾತುಕತೆಯೂ ವಿಫಲವಾಗಿದೆ.
ಮಂಗಳವಾರ ಮಧ್ಯರಾತ್ರಿಯಿಂದ ನಮ್ಮ ಮುಷ್ಕರ ಆರಂಭವಾಗಿದೆ, ನಾವು ನಮ್ಮ ಮುಷ್ಕರವನ್ನು ಮುಂದುವರಿಸುತ್ತಿದ್ದು, ಯಾವುದೇ ಲಾರಿ ರಸ್ತೆಗಿಳಿಯುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಎಐಎಂಟಿಸಿ ಅಧ್ಯಕ್ಷ ಗುರಿಂದರ್ ಪಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ಗೆ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಟನೆಗಳ ಒಕ್ಕೂಟ ಬೆಂಬಲ ಸೂಚಿಸಿದ್ದು, ರಾಜ್ಯದಲ್ಲೂ ಸರಕು ಸಾಗಣೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಏತನ್ಮಧ್ಯೆ ಮುಷ್ಕರ ಹಿಂದಕ್ಕೆ ಪಡೆಯುವಂತೆ ಕೋರಿ ರಾಜ್ಯ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಲಾರಿ ಮಾಲೀಕರ ಸಂಘಟನೆಗಳ ಮುಖಂಡರ ಜತೆ ಅಂತಿಮ ಕ್ಷಣದಲ್ಲಿ ನಡೆಸಿದ ಮಾತುಕತೆ ಮುರಿದು ಬಿದ್ದಿದೆ.
ವೇಗ ನಿಯಂತ್ರಕ ಕಡ್ಡಾಯಗೊಳಿಸಬಾರದು ಎಂದು ಹಲವು ವರ್ಷಗಳಿಂದ ಮನವಿ ಮಾಡಿದರೂ ರಾಜ್ಯ ಸರಕಾರ ಸ್ಪಂದಿಸಿಲ್ಲ, ಈ ಹಿಂದೆ ಮುಷ್ಕರ ನಡೆಸಿದಾಗಲೂ ಬೇಡಿಕೆ ಈಡೇರಿಸುವುದಾಗಿ ಹೇಳಿದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಹಾಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಲಾರಿ ಮಾಲೀಕರ ಸಂಘಟನೆ ತಿಳಿಸಿದೆ.
ತಮ್ಮ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಒಟ್ಟು 48,00.000 ಲಾರಿಗಳು ಮುಷ್ಕರದಿಂದಾಗಿ ಓಡಾಟ ನಡೆಸುವುದಿಲ್ಲ ಎಂದು ಪಾಲ್ ಹೇಳಿದ್ದಾರೆ.
|