ಸಂಧಿವಾತ ರೋಗದಿಂದ 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮತ್ತು ದಯಾ ಮರಣಕ್ಕೆ ಕೂಡ ಬೇಡಿಕೆ ಸಲ್ಲಿಸಿದ್ದ ಇಂಜಿನಿಯರಿಂಗ್ ಗೋಲ್ಡ್ ಮೆಡಲಿಸ್ಟ್, ಯಶಸ್ವಿ ಮೊಣಕಾಲು ಬದಲಾವಣೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಇದು ಅವಳು ತನ್ನ ಕಾಲ ಮೇಲೆ ತಾನು ನಿಲ್ಲವಂತೆ ಮಾಡಲು ಸಹಾಯಕವಾಗಲಿದೆ.
ಪಾಲಂಪುರದ ನಿವಾಸಿ ಸೀಮಾ ಸೂಡ, ಜೂನ್ 25ರಂದು ಶಸ್ತ್ರಕ್ರಿಯೆಗೆ ಒಳಗಾಗಿದ್ದು, ಶಸ್ತ್ರ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಹಿಮಾಚಲ ಪ್ರದೇಶ ಸರಕಾರ ಭರಿಸಿದೆ.
ಗಂಭೀರವಾದ ಸಂಧಿವಾತದಿಂದ ಬಳಲುತ್ತಿದ್ದ ಸೀಮಾಳ ದೇಹದ ಕೀಲುಗಳಾದ - ಪೃಷ್ಠ, ಮೊಣಕೈ, ಭುಜ, ಬೆರಳುಗಳು, ಮಣಿಗಂಟುಗಳು ಚಲನೆಯನ್ನು ಕಳೆದುಕೊಂಡಿದ್ದವು.
ಬಿಐಟಿಎಸ್ ಪಿಲಾನಿ(ರಾಜಸ್ತಾನ)ದಿಂದ ಸ್ವರ್ಣ ಪದಕ ಪಡೆದ ಸ್ನಾತಕೋತ್ತರ ಇಂಜನಿಯರ್ ಸೀಮಾ, ಸುದೀರ್ಘ ಅವಧಿಯ ಚಿಕಿತ್ಸೆಯಿಂದ ಬೇಸತ್ತು ದಯಾ ಮರಣಕ್ಕೆ ಅನುಮತಿ ಕೋರಿ ಮೇ ತಿಂಗಳಿನಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆದಿದ್ದಳು.
2000ದಲ್ಲಿ ತಂದೆಯನ್ನು ಕಳೆದುಕೊಂಡ ಸೀಮಾಳ 70ರ ಹರೆಯದ ತಾಯಿ ಹೊಟ್ಟೆಹೊರೆಯಲು ಸಹ ಬಲುಕಷ್ಟ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಸಲಹೆಯಿತ್ತ ಮೊಣಕಾಲು ಬದಲಾವಣೆಯ ಶಸ್ತ್ರ ಚಿಕಿತ್ಸೆಗೆ ಬೇಕಾಗಿದ್ದ 10 ಲಕ್ಷ ರೂ. ಗಳನ್ನು ಒಟ್ಟುಗೂಡಿಸಲು ಸೀಮಾ ಅಸಮರ್ಥಳಾಗಿದ್ದಳು.
ರಾಜ್ಯ ಸರಕಾರವು ಸಹಾಯ ಹಸ್ತ ಚಾಚಲು ಮುಂದಾಗುವರೆಗೂ, ಸೀಮಾಳ ಪರಿವಾರವು ಈ ಕುರಿತ ಭರವಸೆಯನ್ನೇ ಕಳೆದುಕೊಂಡಿತ್ತು.
ಮಂಗಳವಾರದಂದು ಮುಖ್ಯಮಂತ್ರಿ ಪಿ.ಕೆ ಧುಮಾಲ್ ಅವಳಿಗೆ ಶೀಘ್ರ ಗುಣಮುಖಳಾಗುವಂತೆ ಹಾರೈಸಿದರು ಮತ್ತು ತಮ್ಮ ಸರಕಾರವು ಅವಳಿಗೆ ಯಾವುದೇ ಹೆಚ್ಚುವರಿ ನೆರವನ್ನು ಒದಗಿಸಲು ಸಿದ್ದವಾಗಿದೆ ಎಂದು ನುಡಿದರು.
ತಮ್ಮ ಪಕ್ಷದ ಸಹವರ್ತಿ ಶಾಂತ ಕುಮಾರ್ ಅವರಿಂದ ಸೀಮಾಳ ದುರ್ದೆಸೆಯನ್ನು ತಿಳಿದ ನಂತರ ಮುಖ್ಯಮಂತ್ರಿಗಳು ರಾಜ್ಯ ಸರಕಾರದ ವೆಚ್ಚದಲ್ಲಿ ಅವಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸುವಂತೆ ಆದೇಶ ನೀಡಿದ್ದರು.
|