ಇಲ್ಲಿನ ಸುಪ್ರಸಿದ್ದ ಚಿಕಿತ್ಸಾಲಯವು ನವಜಾತ ಶಿಶುವನ್ನು ಮೃತವೆಂದು ಘೋಷಿಸಿದ ಕೆಲವು ಗಂಟೆಗಳ ಬಳಿಕ ಶಿಶು ಜೀವಂತವಾಗಿರುದಾಗಿ ತಿಳಿದುಬಂದ ಪ್ರಕರಣವೊಂದು ಕೋಲ್ಕತಾದಿಂದ ವರದಿಯಾಗಿದೆ.
ಹೌರಾ ನಿವಾಸಿ ಸಂಗೀತಾ ದಾಸ್ ಅವರಿಗೆ ಭಾನುವಾರದಂದು ಹೆರಿಗೆ ನೋವು ಕಾಣಿಸಿಕೊಂಡಾಗ ಅವರನ್ನು ಬೆಲೆವ್ಯೂ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಮಧ್ಯರಾತ್ರಿಯ ತುಸು ಸಮಯದ ನಂತರ ಅವರನ್ನು ಹೆರಿಗೆ ವಿಭಾಗಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಗಂಡು ಮಗುವಿಗೆ ಜನ್ಮವಿತ್ತರು.
"ಹೆರಿಗೆಯ ಸಮಯದಲ್ಲಿ ಯಾವುದೇ ವೈದ್ಯರು ಉಪಸ್ಥಿತರಿರಲಿಲ್ಲ ಮತ್ತು ಸೋಮವಾರ ಮುಂಜಾನೆ ನರ್ಸ್‌ಗಳು ನಾನು ಮೃತ ಶಿಶುವನ್ನು ಹೆತ್ತಿರುವುದಾಗಿ ತಿಳಿಸಿದರು."ಎಂದು ಸಂಗೀತಾ ಅವರು ಹೇಳಿದ್ದಾರೆ. ಆಸ್ಪತ್ರೆಯ ಆಧಿಕಾರಿಗಳು ಮೃತ ಶಿಶುವಿನ ಜನನದ ಬಗ್ಗೆ ಸುಮಾರು 10 ಗಂಟೆಗಿಂತಲೂ ಹೆಚ್ಚಿನ ಸಮಯದ ನಂತರ ಸಂಗೀತಾ ಅವರ ಪರಿವಾರದವರಿಗೆ ಮಾಹಿತಿ ನೀಡಿದ್ದರು ಮತ್ತು ಸಂಗೀತಾ ಅವರ ಪತಿ ಮಾನಸ್,ಸಂಬಂಧಿಗಳೊಂದಿಗೆ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಗಳನ್ನು ಮಾಡಿ ಆಸ್ಪತ್ರೆ ತಲುಪಿದಾಗ ಮಗು ಬದುಕಿದೆಯೆಂದು ಅವರಿಗೆ ತಿಳಿಸಲಾಯಿತು.
"ನಾವು ಮಗುವಿನ ದೇಹ ಬೆಚ್ಚಗಿರುವುದನ್ನು ಮತ್ತು ಕ್ಷೀಣವಾದ ಎದೆಬಡಿತವನ್ನು ಗುರುತಿಸಿದೆವು. ಈ ಬಗ್ಗೆ ಆಸ್ಪತ್ರೆಯ ಮೇಲ್ವಿಚಾರಕರಿಗೆ ತಿಳಿಸಿದಾಗ ಅವರು ಕೂಡಲೇ ಮಗುವನ್ನು ನಮ್ಮಿಂದ ಕಿತ್ತುಕೊಂಡು ವೈದ್ಯಕೀಯ ನಿಗಾವಣೆಗೆ ಕೊಂಡೊಯ್ದರು"ಎಂದು ಮಾನಸ್‌ರ ಸೋದರ ಸಂಬಂಧಿ ಜಯಂತಾ ಮಜ್ಹಿ ಹೇಳಿದರು.
"ನಾವು ಉತ್ತಮ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೆವು, ಆದರೆ ನಮ್ಮೊಂದಿಗೆ ನಡೆದ ಘಟನೆಯು ದುರದೃಷ್ಟಕರವಾಗಿದೆ ಮತ್ತು ನಾವು ಆಸ್ಪತ್ರೆಯ ಮೇಲ್ವಿಚಾರಕರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ" ಎಂದು ಮಾನಸ್ ತಿಳಿಸಿದರು.
|