ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ಕೇಂದ್ರದ ಯುಪಿಎ ಸರಕಾರದಿಂದ ಬೆಂಬಲ ಹಿಂತೆಗೆಯುವ ಕುರಿತು ನಿರ್ಧರಿಸಲು ಸಭೆ ಸೇರಲು ಸಜ್ಜಾಗುತ್ತಿರುವಂತೆಯೇ, ಸಮಾಜವಾದಿ ಪಕ್ಷದಿಂದ ಶೀಘ್ರ ಬೆಂಬಲ ಲಭ್ಯವಾಗುತ್ತದೆಂಬ ಕಾಂಗ್ರೆಸ್ ಭರವಸೆ ಸದ್ಯಕ್ಕೆ ಪೊಳ್ಳಾಗಿದೆ.
ಯುಎನ್‌ಪಿಎ ಸದಸ್ಯನೂ ಆಗಿರುವ ಸಮಾಜವಾದಿ ಪಕ್ಷವನ್ನು ಆತುರದ ನಿರ್ಧಾರ ಕೈಗೊಳ್ಳದಂತೆ ತಡೆಯುವಲ್ಲಿ ಯುಎನ್‌ಪಿಎ ನಾಯಕರು ಸಫಲವಾಗುವುದರೊಂದಿಗೆ, ಸರಕಾರ ಉಳಿಸುವ ಕಾಂಗ್ರೆಸ್ ಪ್ರಯತ್ನಕ್ಕೆ ಹಿನ್ನಡೆಯುಂಟಾಗಿದೆ.
ಪರಮಾಣು ಒಪ್ಪಂದದ ಸಾಧಕ-ಬಾಧಕಗಳ ಬಗ್ಗೆ ವಿಜ್ಞಾನಿಗಳ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಪ್ರಕಟಿಸಿದ್ದಾರೆ.
ಯುಎನ್‌ಪಿಎ ಅಂಗ ಪಕ್ಷಗಳಾದ ಸಮಾಜವಾದಿ ಪಕ್ಷ, ಟಿಡಿಪಿ, ಎಜಿಪಿ, ಐಎನ್ಎಲ್‌ಡಿ ಮತ್ತು ಜೆವಿಪಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ರಾಷ್ಟ್ರೀಯ ಲೋಕಗಳ ನಾಯಕ ಓಂ ಪ್ರಕಾಶ್ ಚೌತಾಲ, ಸರಕಾರಕ್ಕೆ ಬೆಂಬಲ ನೀಡುವ ಕುರಿತಾಗಿ ಪ್ರಮಾಣಪತ್ರ ನೀಡುವುದು ಜುಲೈ 6ರ ಮೊದಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜಪಾನ್‌ನಲ್ಲಿ ನಡೆಯುವ ಜಿ-8 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಜುಲೈ ಏಳರಂದು ತೆರಳಲಿದ್ದು, ಅವರು ಅಲ್ಲಿಗೆ ಹೋಗುವುದೇ ಪರಮಾಣು ಒಪ್ಪಂದದ ಬಗ್ಗೆ ಮುಂದುವರಿಯುವ ಸೂಚನೆಯಾಗಿರುತ್ತದೆ ಎಂದು ಎಡಪಕ್ಷಗಳು ಬಲವಾಗಿ ನಂಬಿವೆ.
'ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ' ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮುಖಂಡ ಮುಲಾಯಂ ಸಿಂಗ್ ಘೋಷಿಸಿದರು. ಆದರೆ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡರೆ ಯುಪಿಎ ಸರಕಾರದ ಉಳಿವಿಗೆ ಅಗತ್ಯವಾಗಿರುವ 39 ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷವು, ಕಾಂಗ್ರೆಸ್‌ಗೆ ಬೆಂಬಲಿಸುವ ಸುಳಿವನ್ನು ಮತ್ತೊಮ್ಮೆ ಹೊರಹಾಕಿದೆ. ಪರಮಾಣು ಒಪ್ಪಂದಕ್ಕಿಂತಲೂ ಕೋಮುವಾದವೇ ಮುಖ್ಯ ಸಂಗತಿ ಎಂದು ಅದು ಹೇಳಿದೆ.
|