ಲಾರಿ ಮಾಲೀಕರ ಮತ್ತು ಸರಕಾರದ ನಡುವಿನ ದೀರ್ಘಾವಧಿಯ ಮಾತುಕತೆಯ ನಂತರ ಲಾರಿ ಮಾಲೀಕರ ಬೇಡಿಕೆಗಳನ್ನು ಪೂರೈಸಲು ಸರಕಾರವು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಮೂರು ದಿನಗಳ ಕಾಲ ನಡೆದ ಲಾರಿ ಮುಷ್ಕರವು ಶುಕ್ರವಾರ ಅಂತ್ಯ ಕಂಡಿದೆ.
ದಾರಿ ಸುಂಕ ಹಿಂತೆಗೆತ, ಬ್ರ್ಯಾಂಡ್ ಅಲ್ಲದ ಡೀಸೆಲ್‌ಗಳ ಲಭ್ಯತೆ, ವೇಗ ನಿಯಂತ್ರಕ(ಸ್ಪೀಡ್ ಗವರ್ನರ್) ಅಳವಡಿಕೆಗೆ ಸಂಬಂಧಿಸಿ ಅನೇಕ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಲಾರಿ ಮುಷ್ಕರಕ್ಕೆ ಕರೆ ನೀಡಿದ್ದರು.
ಸೇವಾ ತೆರಿಗೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಫೋರ್ಟ್ ಕಾಂಗ್ರೆಸ್ ಅಧ್ಯಕ್ಷ ಚರಣ್ ಸಿಂಗ್ ಲೋಹಾರ್ ಮಾತುಕತೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸುಂಕದರ ಕುರಿತಾದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಲು ಎನ್‌ಎಚ್ಎಐ, ರಸ್ತೆ ಇಲಾಖೆ, ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ಸರಕಾರಿ ಅಧಿಕಾರಿಗಳು ಹಾಗೂ ಆರ್ ಎಐಎಂಟಿಸಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ಹೇಳಿದರು. ಸಮಿತಿಯ ರಚನೆಯ ಒಂಬತ್ತು ತಿಂಗಳೊಳಗೆ ತನ್ನ ವರದಿಯನ್ನು ಸಮಿತಿಯು ಸಲ್ಲಿಸಲಿದೆ.
ಅಲ್ಲದೇ ಸ್ಪೀಡ್ ಗವರ್ನರ್ ಮತ್ತು ಮೆಕ್ಯಾನಿಕಲ್ ತೆರಿಗೆ(ಪಶ್ಚಿಮಬಂಗಾಳ, ಒರಿಸ್ಸಾ ಮತ್ತು ತಮಿಳುನಾಡಿಗೆ ಅನ್ವಯವಾಗಲಿರುವ) ಸಮಸ್ಯೆಯನ್ನೂ ಈ ಸಂದರ್ಭದಲ್ಲಿ ಬಗೆಹರಿಸಲಾಗಿದೆ ಎಂದು ತಿಳಿಸಿದ ಲೋಹಾರ್, ಒಪ್ಪಂದದಂತೆ ಸೇವಾ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಲಾರಿ ಮಾಲಿಕರಿಗೆ ಜಾರಿಗೊಳಿಸಿದ ನೋಟಿಸ್ ಅನ್ನು ಹಿಂದಕ್ಕೆ ಪಡೆಯಲಾಗುವುದಾಗಿ ಸರಕಾರ ತಿಳಿಸಿದೆ ಎಂದು ಹೇಳಿದರು.
ಕಳೆದ ಮೂರು ದಿನಗಳಿಂದ ಸೇವಾ ತೆರಿಗೆ ರದ್ದತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದ್ದ ಲಾರಿ ಮಾಲಿಕರು ಶುಕ್ರವಾರದಿಂದ ಮುಷ್ಕರವನ್ನು ಅಂತ್ಯಗೊಳಿಸಿರುವುದಾಗಿ ಹೇಳಿದ್ದಾರೆ.
|