ಗುರುವಾರದ ರಾಷ್ಟ್ರವ್ಯಾಪಿ ಬಂದ್ ಯಶಸ್ವಿಯಾಗಿದೆ ಎಂದು ಪ್ರಕಟಿಸಿರುವ ವಿಶ್ವ ಹಿಂದು ಪರಿಷದ್, ಜಮ್ಮು ಮತ್ತು ಕಾಶ್ಮೀರ ಸರಕಾರ ಅಮರನಾಥ ಮಂದಿರ ಮಂಡಳಿಗೆ(ಎಸ್.ಎ.ಎಸ್.ಬಿ) ಜಮೀನು ವರ್ಗಾವಣೆಯ ನಿರ್ಣಯ ಹಿಂತೆಗೆತದ ತನ್ನ ನಿರ್ಧಾರವನ್ನು ರದ್ದುಪಡಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ತಿಳಿಸಿದೆ.
"ರಾಜ್ಯ ಸರಕಾರದ ಹಿಂದು-ವಿರೋಧಿ ಕ್ರಮದ ವಿರುದ್ದ, ಅದು ತನ್ನ ತೀರ್ಮಾನವನ್ನು ಹಿಂಪಡೆದುಕೊಳ್ಳುವವರೆಗೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ" ಎಂದು ವಿಎಚ್‌ಪಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯ ವರದಿಗಾರರಿಗೆ ತಿಳಿಸಿದ್ದಾರೆ.
ಸರಕಾರವು ತಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದಲ್ಲಿ ತಮ್ಮ ಸಂಘಟನೆಯು ಹಿಂಸಾತ್ಮಕ ದಾರಿಯನ್ನು ಆನುಸರಿಸಲು ಹಿಂಜರಿಯುವುದಿಲ್ಲ ಎಂದೂ ಅವರು ಹೇಳಿದರು.
ವಿಎಚ್‌ಪಿ ಮತ್ತು ಬಿಜೆಪಿ ಕರೆ ನೀಡಿದ್ದ 'ಭಾರತ್ ಬಂದ್'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರ ಕಾರ್ಯಕರ್ತರು ರಸ್ತೆ ತಡೆ, ರೈಲು ತಡೆ ನಡೆಸಿದ್ದು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಒತ್ತಾಯಿಸಿದ್ದರಿಂದ ದೇಶದ ಹಲವು ಭಾಗಗಳಲ್ಲಿ ಸಾಮಾನ್ಯ ಜನಜೀವನವು ಪ್ರಭಾವಿತಗೊಂಡಿತ್ತು.
"ಜುಲೈ 5ರಿಂದ 12ರವರೆಗೆ ಅಮರನಾಥ ಯಾತ್ರಾ ಸಪ್ತಾಹವನ್ನು ಸಹ ನಾವು ಆಚರಿಸಲಿದ್ದು, ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುತ್ತೇವೆ" ಎಂದು ತೊಗಾಡಿಯ ನುಡಿದರು.
|