ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನಡುವಣ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದ್ದು, ಜುಲೈ 7ರ ಗಡುವು ವಿಧಿಸಿದ ಎಡಪಕ್ಷಗಳ ವಿರುದ್ಧ ತೀವ್ರ ಕೆಂಡ ಕಾರಿರುವ ಕಾಂಗ್ರೆಸ್, ಸಾರ್ವಭೌಮ ಸರಕಾರ ಇಲ್ಲವೇ ರಾಜಕೀಯ ಪಕ್ಷಗಳಿಗೆ ಅಂತಿಮ ಗಡುವು ವಿಧಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ಅನುಷ್ಠಾನಗೊಳಿಸುವಲ್ಲಿ ಹೆಜ್ಜೆ ಮುಂದಿಟ್ಟರೆ ಬೆಂಬಲ ಹಿಂತೆಗೆತದ ಬೆದರಿಕೆಯೊಡ್ಡಿದ್ದ ಎಡಪಕ್ಷಗಳು, ಐಎಇಎ ಜತೆ ಮಾತುಕತೆಗೆ ಮುಂದಾಗುವುದೇ ಎಂಬುದನ್ನು ಜುಲೈ 7ರೊಳಗೆ ಸ್ಪಷ್ಟಪಡಿಸಬೇಕು ಎಂದು ಅಂತಿಮ ಗಡುವು ವಿಧಿಸಿದ್ದವು.
ಸರಕಾರವು ಐಎಇಎ ಬೋರ್ಡ್ ಆಫ್ ಗವರ್ನರ್‌ಗಳ ಸುರಕ್ಷತಾ ಒಪ್ಪಂದಕ್ಕೆ ಅಂಕಿತ ಹಾಕುವ ನಿಟ್ಟಿನಲ್ಲಿ ಖಚಿತವಾಗಿ ಮುಂದುವರಿಯುತ್ತದೆಯೇ ಎಂಬುದು ನಮಗೆ ತಿಳಿಯಬೇಕು ಮತ್ತು ದಯವಿಟ್ಟು ಜುಲೈ 7ರೊಳಗೆ ಇದನ್ನು ತಿಳಿಯಪಡಿಸಿ ಎಂದು ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಶುಕ್ರವಾರ ಬರೆದಿರುವ ಪತ್ರದಲ್ಲಿ ಎಡಪಕ್ಷಗಳು ಆಗ್ರಹಿಸಿವೆ.
ಶುಕ್ರವಾರ ಬೆಳಿಗ್ಗೆ ಸಭೆ ಸೇರಿದ್ದ ಎಡರಂಗ, ಪುನಃ ಜು.8ರಂದು ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿವೆಯಲ್ಲದೆ, ಪರಮಾಣು ಒಪ್ಪಂದಕ್ಕೆ ತಮ್ಮ ವಿರೋಧ ಯಾಕಾಗಿ ಎಂಬುದನ್ನು ಜನತೆಗೆ ತಿಳಿಯಪಡಿಸುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಆಂದೋಲನ ನಡೆಸಲು ಕೂಡ ತೀರ್ಮಾನಿಸಿವೆ.
|