ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯ ವೇಳೆ ಕಾಲ್ತುಳಿತಕ್ಕೆ ಆರು ಮಂದಿ ಬಲಿಯಾಗಿದ್ದು, ಈ ಕುರಿತಾಗಿ ತನಿಖೆ ನಡೆಸುವಂತೆ ಒರಿಸ್ಸಾ ಸರಕಾರವು ಆದೇಶ ನೀಡಿದೆ. ಅಲ್ಲದೆ, ಮೃತಪಟ್ಟವರಿಗೆ ಒಂದು ಲಕ್ಷ ಪರಿಹಾರ ಧನವನ್ನೂ ಸರಕಾರವು ಘೋಷಿಸಿದೆ.
ಶುಕ್ರವಾರ ಪ್ರಾರಂಭಗೊಂಡ ವೈಭವಯುತ ಜಗನ್ನಾಥ ರಥಯಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದು, ಜಗನ್ನಾಥ ಬಲಭದ್ರ ಮತ್ತು ಸುಭದ್ರೆಯರ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ದೇವಾಲಯದಲ್ಲಿ ನಡೆದ ಈ ದುರಂತದಿಂದಾಗಿ ಭದ್ರತಾ ವ್ಯವಸ್ಥೆಯ ಕುರಿತಾಗಿ ಪುರಿ ದೇವಾಲಯದ ಆಡಳಿತ ಮಂಡಳಿಯ ಮೇಲೆ ಎಲ್ಲರು ಕೆಂಗಣ್ಣು ಬೀರುವಂತಾಗಿದೆ. ಆದರೆ, ಸುಮಾರು 4000 ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಭದ್ರತಾ ವ್ಯವಸ್ಥೆಯು ಉತ್ತಮವಾಗಿಯೇ ಇತ್ತು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕಳೆದ 20 ತಿಂಗಳಲ್ಲಿ ಜಗನ್ನಾಥ ದೇವಾಲಯದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಘಟನೆಯು ಇದು ಎರಡನೆಯದು. 2006ರ ನವೆಂಬರ್‌ನಲ್ಲಿ ದೇವಾಲಯದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದರು. 2006ರ ಕಾಲ್ತುಳಿತ ವರದಿಗಳನ್ನು ನ್ಯಾಯಮೂರ್ತಿ ಪಿ.ಕೆ.ಮೋಹಂತಿ ಸಮಿತಿಯು ಇನ್ನೂ ಸಲ್ಲಿಸಿಲ್ಲ.
ಇದಕ್ಕೂ, ಮುನ್ನ 1993ರಲ್ಲಿ ಪುರಿ ದೇವಾಲಯದಲ್ಲಿ ಉಂಟಾದ ಕಾಲ್ತುಳಿತಕ್ಕೆ ಆರು ಮಂದಿ ಬಲಿಯಾಗಿದ್ದರು. 1993 ಮತ್ತು 2006ರ ಘಟನೆಗಳು ದೇವಾಲಯದ ಒಳಗೆ ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಉಂಟಾಗಿದ್ದರೆ, ನಿನ್ನೆಯ ಘಟನೆಯು ಮೊದಲ ಬಾರಿಗೆ ದೇವಾಲಯದ ಹೊರಭಾಗದಲ್ಲಿ ಉಂಟಾಗಿದೆ.
|