ಅಣ್ವಸ್ತ್ರ ಒಪ್ಪಂದ ವಿಷಯದಲ್ಲಿ ಯುಎನ್‌ಪಿಎಗೆ 'ಕೈ' ಕೊಟ್ಟು ಒಂದು ಕಾಲದ 'ಪರಮವೈರಿ' ಕಾಂಗ್ರೆಸ್ ಜತೆ ಸೇರಿಕೊಂಡ ಹಿನ್ನೆಲೆಯಲ್ಲಿ ತೃತೀಯ ರಂಗದಲ್ಲಿ ಬಿರುಕಿನ ಬಗ್ಗೆ ತೀವ್ರ ಟೀಕೆ ಎದುರಿಸುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ಗಿಂತಲೂ ಎಲ್.ಕೆ.ಆಡ್ವಾಣಿಯೇ ಅತಿದೊಡ್ಡ ಬೆದರಿಕೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಬಣ್ಣಿಸಿದ್ದಾರೆ.
ಕಾಂಗ್ರೆಸ್ ಜೊತೆ ಕೈಜೋಡಿಸಿರುವುದನ್ನು ಸಮರ್ಥಿಸಲು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರ್ ಸಿಂಗ್, ಕೋಮುವಾದಿಗಳನ್ನು ದೂರವಿಡಲು ಮತ್ತು ರಾಷ್ಟ್ರದ ಹಿತಾಸಕ್ತಿಯಿಂದ ಎಸ್ಪಿ ಈ ಕ್ರಮ ಕೈಗೊಂಡಿದೆ ಎಂದರು.
ಅಣ್ವಸ್ತ್ರ ಒಪ್ಪಂದ ಬೆಂಬಲಿಸಿದರೆ ಮುಸ್ಲಿಮರ ಮತ ಕಳೆದುಕೊಳ್ಳಬೇಕಾಗುತ್ತದೆ ಎಂಬ ವಾದವೂ ಇರುವ ಹಿನ್ನೆಲೆಯಲ್ಲಿ, ಮತ ಬ್ಯಾಂಕ್‌ಗೆ ಆಘಾತವಾಗದಿರಲು ಬಿಜೆಪಿ ವಿರುದ್ಧ ವಾಗ್ದಾಳಿ ತೀಕ್ಷ್ಣಗೊಳಿಸಿರುವಂತೆ ಕಂಡು ಬಂದ ಅವರು, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಎಡಪಕ್ಷ, ಬಿಜೆಪಿ, ಬಿಎಸ್ಪಿ ಮತ್ತು ಇತರ ಪಕ್ಷಗಳು ಸರಕಾರದ ವಿರುದ್ಧ ಮತ ಹಾಕಬಹುದು. ಆದರೆ ನಾವು ಈ ನಿಟ್ಟಿನಲ್ಲಿ ಕೋಮುವಾದಿ ಬಿಜೆಪಿ ಜತೆ ಕೈಜೋಡಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.
ಹಾಗಿದ್ದರೆ ಯುಎನ್‌ಪಿಎ ಗತಿಯೇನು ಎಂದು ಕೇಳಿದಾಗ, ಯಾವ ತತ್ವಗಳ ಆಧಾರದಲ್ಲಿ ಈ ಮೈತ್ರಿಕೂಟ ರಚನೆಯಾಗಿತ್ತೋ, ಅದು ಈಗಲೂ ಸದೃಢವಾಗಿದೆ ಎಂದರು. ಆದರೆ ಸಮಾಜವಾದಿ ಪಕ್ಷವು ಯುಎನ್‌ಪಿಎ ಭಾಗವಾಗಿ ಉಳಿದಿಲ್ಲ ಎಂಬ ಇತರ ಮೈತ್ರಿ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಯುಎನ್‌ಪಿಎಯಲ್ಲಿ ಒಡಕು ಈ ಮೊದಲು, ಸಮಾಜವಾದಿ ಪಕ್ಷವು ಯುಎನ್‌ಪಿಎಯಿಂದ ತಾನಾಗಿಯೇ ಹೊರ ಹೋಗಿದೆ ಎಂದು ತಿಳಿಸಿದ್ದ ಅದರ ಅಂಗಪಕ್ಷವಾಗಿರುವ ಲೋಕದಳ ಮುಖ್ಯಸ್ಥ ಓಂ ಪ್ರಕಾಶ್ ಚೌತಾಲ, ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿ ವಿರುದ್ಧ ಮತ ಚಲಾಯಿಸುವುದಾಗಿ ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಈ ಮೊದಲು ಕೂಡ ಸಮಾಜವಾದಿ ಪಕ್ಷವನ್ನು ಅವಮಾನಿಸಿದೆ. ಈಗ ಮೂರನೇ ಬಾರಿಗೆ ಅವರು ಅವಮಾನಿತರಾಗಲು ಹೊರಟಿದ್ದಾರೆ. ಅದು ಅವರ ಹಣೆಬರಹ ಎಂದೂ ಚೌತಾಲ ಹೇಳಿದ್ದರು.
ಈ ಮಧ್ಯೆ, ಯುಎನ್‌ಪಿಎ ಅಂಗ ಪಕ್ಷ ಅಸೋಮ್ ಗಣ ಪರಿಷತ್ (ಎಜಿಪಿ) ಹೇಳಿಕೆಯೊಂದನ್ನು ನೀಡಿ, ಮುಲಾಯಂ ನೇತೃತ್ವದ ಪಕ್ಷವನ್ನು ಮೈತ್ರಿಕೂಟದಲ್ಲಿ ಉಳಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಯುಎನ್‌ಪಿಎ ಪಕ್ಷಗಳೆಲ್ಲಾ ಸೇರಿ ನಿರ್ಣಯ ಕೈಗೊಳ್ಳಲಿವೆ ಎಂದು ತಿಳಿಸಿದೆ.
|