ರಾಷ್ಟ್ರಾದ್ಯಾಂತ ಸಂಚಲನ ಮೂಡಿಸಿದ್ದ ನೋಯ್ಡಾದ ಜೋಡಿ ಕೊಲೆ ಪ್ರಕರಣ ನಡೆದು ತಿಂಗಳೊಂದು ಕಳೆದಿದ್ದರೂ, ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲು ಅಸಾಧ್ಯವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ, ಸಾವಿಗೀಡಾದ ಅರುಷಿಯ ತಂದೆ ಹಾಗೂ ವೈದ್ಯ ರಾಜೇಶ್ ತಲ್ವಾರ್ ವಿರುದ್ಧ ಯಾವುದೇ ಪುರಾವೆ ಲಭ್ಯವಾಗಿಲ್ಲ. ಹಾಗಾಗಿ ಸಿಬಿಐ, ತಲ್ವಾರ್ ವೈದ್ಯ ದಂಪತಿಗಳಿಗೆ 'ಕ್ಲೀನ್ ಚಿಟ್' ನೀಡುವ ಸಂಭವವಿದೆ.
ಅದೇವೇಳೆಗೆ ಈಗ ಸಂಶಯದ ಸೂಜಿಯು, ದುರಾನಿ ದಂಪತಿಗಳ ಮನೆಗೆಲಸದಾಳು ರಾಜ್ ಕುಮಾರ್ ಹಾಗೂ ತಲ್ವಾರ್ ಅವರ ಸಹಾಯಕ ಕೃಷ್ಣ ವಿರುದ್ಧ ಹೊರಳುತ್ತಿದೆ.
ಜೂನ್ ಒಂದರಂದು ಸಿಬಿಐ ನೋಯ್ಡಾ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದ್ದು, ತನಿಖೆ ಆರಂಭಿಸಿತ್ತು. ಮೇ.23ರಂದು ಸಿಬಿಐ ರಾಜೇಶ್ ತಲ್ವಾರ್ ಅವರನ್ನು ಬಂಧಿಸಿದ್ದು, ಅವರೀಗ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ರಾಜೇಶ್ ಅಥವಾ ಅವರ ಪತ್ನಿ ನೂಪುರ್ ಆಗಿರಲಿ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ ಎಂದು ಹೇಳಲಾಗಿದೆ.
ತಲ್ವಾರ್ ದಂಪತಿಗಳ ಪುತ್ರಿ ಅರುಷಿ ಮತ್ತು ಮನೆಗೆಲಸದಾಳು ಹೇಮರಾಜ್ ಕೊಲೆಯಾದ ಸ್ಥಿತಿಯಲ್ಲಿ ರಾಜೇಶ್ ನಿವಾಸದ ಪಕ್ಕ ಪತ್ತೆಯಾಗಿದ್ದರು. ಕೊಲೆಯ ವೇಳೆಗೆ ಅರುಷಿಯ ಕಿರುಚಾಟ ತಲ್ವಾರ್‌ಗಳಿಗೆ ಕೇಳಿಸಿದೆಯೇ ಇಲ್ಲವೇ ಎಂಬ ಕುರಿತು ಸಿಬಿಐ ಪತ್ತೆ ಮಾಡುತ್ತಿದೆ. ಅರುಷಿಯ ಕಿರುಚಾಟ ತಮಗೆ ಕೇಳಿಸಿಲ್ಲ ಎಂಬ ಅರುಷಿಯ ಹೆತ್ತವರ ಹೇಳಿಕೆ ಸರಿಯಾದುದು ಎಂಬ ಅಭಿಪ್ರಾಯಕ್ಕೆ ಸಿಬಿಐ ಬಂದಿದೆ ಎಂದು ಹೇಳಲಾಗಿದೆ.
|