ಭಾರತ - ಅಮೆರಿಕ ಅಣುಒಪ್ಪಂದದಕ್ಕೆ ಸಂಬಧಿಸಿದಂತೆ ಸರಕಾರವು ಐಎಇಎ ಸುರಕ್ಷತಾ ಒಪ್ಪಂದದಲ್ಲಿ ಮುಂದುವರಿಯಲಿದೆಯೇ ಎಂಬುದಾಗಿ ಕೇಳಿ ಎಡಪಕ್ಷಗಳು ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಕಾಂಗ್ರೆಸ್, ಈ ವಿವಾದದ ಕುರಿತು ಜುಲೈ 10ರಂದು ಯುಪಿಎ- ಎಡಪಕ್ಷಗಳ ಸಮಿತಿಯ ಇನ್ನೊಂದು ಸುತ್ತಿನ ಸಭೆಯ ಪ್ರಸ್ತಾಪವಿಟ್ಟಿದೆ.
ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಎಡಪಕ್ಷಗಳು ತಮ್ಮ ಭವಿಷ್ಯದ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲು ನಿರ್ಧರಿಸಿರುವಂತೆಯೇ, ಸಮಿತಿಯ ನೇತೃತ್ವ ವಹಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಎಡ ಪಕ್ಷಗಳ ನಾಯಕರಿಗೆ ಸಂಕ್ಷಿಪ್ತ ಉತ್ತರ ನೀಡಿದ್ದು ಗುರುವಾರ ಇನ್ನೊಂದು ಸುತ್ತಿನ ಮಾತುಕತೆಯ ಸಲಹೆ ನೀಡಿದ್ದಾರೆ.
ನಾವು ಪತ್ರ ಸ್ವೀಕರಿಸಿದ್ದೇವೆ. ಭವಿಷ್ಯದ ಕ್ರಮಗಳ ಕುರಿತು ನಾವು ನಾಳೆ ಸಭೆ ಸೇರಲಿದ್ದೇವೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸೋಮವಾರ ಇಲ್ಲಿ ಹೇಳಿದ್ದಾರೆ. ಇತರ ಮೂರು ಎಡಪಕ್ಷಗಳ ನಾಯಕರೂ ಪತ್ರ ಸ್ವೀಕರಿಸಿರುವುದನ್ನು ದೃಢಪಡಿಸಿದ್ದಾರೆ.
ಸರಕಾರವು ಐಎಇಎ ಒಪ್ಪಂದದಲ್ಲಿ ಮುಂದುವರಿದ ತಕ್ಷಣವೇ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಾಸು ಪಡೆಯಲು ಎಡಪಕ್ಷಗಳು ನಿರ್ಧರಿಸಿವೆ.
ಆರ್ಎಸ್‌ಪಿ ಪ್ರಧಾನ ಕಾರ್ಯದರ್ಶಿ ಟಿ.ಜೆ.ಚಂದ್ರಚೂಡನ್ ಅವರು ಈ ಪತ್ರವು ಬದ್ಧತೆಗೊಳಪಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದು, ಈ ಕುರಿತು ಮಂಗಳವಾರ ನಿರ್ಧರಿಸುವುದಾಗಿ ಹೇಳಿದ್ದಾರೆ. ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಾಜ ಅವರೂ, ಎಡಪಕ್ಷಗಳು ತಮ್ಮ ಭವಿಷ್ಯದ ನಿರ್ಧಾರವನ್ನು ಮಂಗಳವಾರದ ಸಭೆಯಲ್ಲಿ ನಿರ್ಧರಿಸುವುದಾಗಿ ಹೇಳಿದ್ದಾರೆ.
ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳು ಲೋಕಸಭೆಯಲ್ಲಿ 59 ಸ್ಥಾನಗಳನ್ನು ಹೊಂದಿದ್ದು, ಆಡಳಿತಾರೂಢ ಯುಪಿಎಯು ಐಎಇಎ ಒಪ್ಪಂದದಲ್ಲಿ ಮುಂದುವರಿಯಲಿದೆಯೇ ಎಂಬುದನ್ನು ಸ್ಪಷ್ಟೀಕರಿಸಲು ಸೋಮವಾರದ ಅಂತಿಮ ಗಡು ನೀಡಿತ್ತು.
|