ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿಯವರು ಜೂನ್ 30ರಂದು ತಮ್ಮ "ಮೈ ಕಂಟ್ರಿ ಮೈ ಲೈಫ್" ಪುಸ್ತಕದ ಹಿಂದಿ ಆವೃತ್ತಿ ಬಿಡುಗಡೆ ವೇಳೆ ರಾಷ್ಟ್ರಧ್ವಜವನ್ನು ಅವಮಾನಿಸಿರುವುದಾಗಿ ಆರೋಪಿಸಿ ಅವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಸಂವಿಧಾನತ್ಮಕವಾಗಿ ರಾಷ್ಟ್ರಧ್ವಜದ ವಾಣಿಜ್ಯೀಕರಣ ಅಂಗೀಕೃತವಲ್ಲ, ಅದರ ಮೇಲೆ ಯಾವುದೇ ಶಬ್ಧಗಳನ್ನು ಮುದ್ರಿಸಬಾರದು, ಅದನ್ನು ಅಥಿತಿಗಳ ಮತ್ತು ಗಣ್ಯರ ಮೇಜುಗಳನ್ನು ಅಲಂಕರಿಸಲು ಬಳಸಬಾರದು ಮತ್ತು ನೆಲದ ಮೇಲೆ ಹರಡಬಾರದು ಎಂದು ದೂರುದಾರ ಶಹಿದುಲ್ ರೆಹಮಾನ್‌ರ ವಕೀಲ ರಾಜಕುಮಾರ್ ಪಾಂಡೆ ಹೇಳಿದ್ದಾರೆ.
ದೂರುದಾರರ ವಾದದ ಪ್ರಕಾರ ಅಡ್ವಾಣಿ ಅವರ ಪುಸ್ತಕದ ಹಿಂದಿನ ಹೊದಿಕೆಯು ರಾಷ್ಟ್ರಧ್ವಜದ ತ್ರಿವರ್ಣವನ್ನು ಹೊಂದಿದೆ. ಅದಲ್ಲದೆ ಜೂನ್ 30ರ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ನಗರದಲ್ಲಿ ಪ್ರಚಾರದ ಸಲುವಾಗಿ ಜಾಹಿರಾತು ಫಲಕಗಳಲ್ಲಿಯೂ ಪುಸ್ತಕದ ಹೊದಿಕೆಯನ್ನು ಪ್ರದರ್ಶಿಸಲಾಗಿತ್ತು. ಮತ್ತು ಈ ಜಾಹಿರಾತು ಫಲಕಗಳು ಮತ್ತು ಕಟ್‌ಔಟ್‌ಗಳು ಒದ್ದೆಯಾಗಿರುವ ನೆಲದ ಮೇಲೆ ಹರಡಿಕೊಂಡಿದ್ದವು ಎಂದು ಆರೋಪಿಸಲಾಗಿದೆ.
ಇವೆಲ್ಲವು ಜೂನ್ 30ರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಡ್ವಾಣಿ ಅವರ ಸಮ್ಮುಖದಲ್ಲೆ ನಡೆದಿದ್ದು, ಇದು ತ್ರಿವರ್ಣಧ್ವಜಕ್ಕಾದ ಅಪಮಾನ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಮೊಕದ್ದಮೆಯನ್ನು ಪ್ರಥಮ ಶ್ರೇಣಿಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ರಾಜ್‌ಕುಮಾರ್ ಸೊನ್‌ಕರ್ ಅವರಿಗೆ ಮುಂದಿನ ವಿಚಾರಣೆಗಾಗಿ ವರ್ಗಾಯಿಸಲಾಗಿದೆ.
|