ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ಸರಕಾರದ ಮನವಿಯ ಮೇರೆಗೆ, ಭಾರತಕ್ಕೆ ಪ್ರತ್ಯೇಕವಾಗಿ ಅನ್ವಯಿಸುವ ಪರಮಾಣು ಸುರಕ್ಷತಾ ಒಪ್ಪಂದದ ಕರಡು ದಾಖಲೆಯನ್ನು ಅನುಮೋದನೆಗಾಗಿ ಪರಮಾಣು ಕಾವಲು ಸಂಸ್ಥೆಯಾಗಿರುವ ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ(ಐಎಇಎ) ಯ ಆಡಳಿತ ಮಂಡಳಿಯ ಸದಸ್ಯರಿಗೆ ನೀಡಲಾಗಿದೆ.
ಭಾರತ ಅಮೆರಿಕ ಪರಮಾಣು ಒಪ್ಪಂದದ ಮುಂದಿನ ಹಂತವಾಗಿರುವ ಈ ಸುರಕ್ಷತಾ ಒಪ್ಪಂದವನ್ನು ಎಡಪಕ್ಷಗಳು ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ 35 ರಾಷ್ಟ್ರಗಳ ಮಂಡಳಿಗೆ ಕಳುಹಿಸಲಾಗಿದೆ.
ಭಾರತ ಸರಕಾರದ ಕೋರಿಕೆಯ ಮೇರೆಗೆ ಈ ಕರಡು ದಾಖಲೆಯನ್ನು ನಿರ್ದೇಶಕ ಮಂಡಳಿಗೆ ವಿತರಿಸಲಾಗಿದೆ ಎಂದು ಐಎಇಎ ತಿಳಿಸಿದ್ದು, ಒಪ್ಪಂದ ಜಾರಿ ನಿಟ್ಟಿನಲ್ಲಿ ಇದೊಂದು ಮಹತ್ವದ ತಿರುವು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿ ಅವರು ಒಪ್ಪಂದದಲ್ಲಿ ಮುಂದುವರಿಯುವುದಾಗಿ ಈ ಮೊದಲೇ ಹೇಳಿರುವುದರಿಂದ ಇದು ನಿರೀಕ್ಷಿತವೇ. ಆದರೆ ಸರಕಾರದ ನಡೆ ಇನ್ನಷ್ಟು ಪಾರದರ್ಶಕವಾಗಿರಬೇಕಿತ್ತು ಎಂಬುದಾಗಿ ಈ ವಿಶಿಷ್ಟ ಬೆಳವಣಿಗೆಯ ಕುರಿತು ಸಿಪಿಐ ನಾಯಕ ಡಿ.ರಾಜಾ ಪ್ರತಿಕ್ರಯಿಸಿದ್ದಾರೆ.
ಈ ವ್ಯತಿರಿಕ್ತ ಬೆಳವಣಿಗೆಯ ಬಗ್ಗೆ ಬಿಜೆಪಿಯು ಟೀಕಾಪ್ರಹಾರವನ್ನೇ ನಡೆಸಿದ್ದು, ಸರಕಾರದ ಈ ನಿಲುವು ಅನಪೇಕ್ಷಿತವಾಗಿದೆ, ಅದಕ್ಕೆ ಯಾವುದೇ ಪಾವಿತ್ರ್ಯತೆಯೂ ಇಲ್ಲ. ಅಲ್ಲದೆ, ಇದು ಸ್ವೀಕಾರಾರ್ಹವಲ್ಲ ಎಂಬುದಾಗಿ ಆರೋಪಿಸಿದೆ.
|