ಆಳುವವರು ಕೇಳದಿದ್ದರೆ ಏನು ಮಾಡಬೇಕು? ಹಣೆ ಹಣೆ ಚಚ್ಚಿಕೊಳ್ಳಬೇಕು. ಅಂಥದ್ದೇ ಮಾಡಲು ಹೊರಟಿದ್ದಾರೆ ಮಹಾರಾಷ್ಟ್ರದ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ (ಎಎನ್ಎಸ್) ಸದಸ್ಯರು.
ಜೂನ್ 16ರಂದು ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಂಧಶ್ರದ್ಧೆ-ವಿರೋಧೀ ಮಸೂದೆಗೆ ಅಂಗೀಕಾರ ನೀಡದ ಮಹಾರಾಷ್ಟ್ರ ಸರಕಾರದ 'ನಿಷ್ಕ್ರಿಯತೆ' ವಿರೋಧಿಸಿ ರಾಜ್ಯಾದ್ಯಂತ ಸ್ವಯಂ-ಹೊಡೆದುಕೊಳ್ಳುವ ಪ್ರತಿಭಟನಾ ಪ್ರದರ್ಶನಗಳನ್ನು ಮಾಡಲಿದ್ದಾರೆ.
ಮಾಟ-ಮಂತ್ರ ಮತ್ತಿತರ ಮೂಢ ನಂಬಿಕೆಯ ಆಚರಣೆಗಳನ್ನು ನಿಷೇಧಿಸುವ ಉದ್ದೇಶ ಹೊಂದಿರುವ ಮಸೂದೆಗೆ ಅಂಗೀಕಾರ ನೀಡಲು ವಿಲಾಸರಾವ್ ದೇಶಮುಖ್ ನೇತೃತ್ವದ ಕಾಂಗ್ರೆಸ್-ಎನ್‌ಸಿಪಿ ಸರಕಾರದ 'ರಾಜಕೀಯ ಇಚ್ಛಾಶಕ್ತಿಯ ಕೊರತೆ'ಯನ್ನು ಕೇಂದ್ರೀಕರಿಸಿ ಎಎನ್ಎಸ್ ಸ್ವಯಂಸೇವಕರು 'ಸ್ವಯಂ ದಂಡನೆ' ಮಾಡಿಕೊಳ್ಳಲಿದ್ದಾರೆ ಎಂದು ಅದರ ಕಾರ್ಯಾಧ್ಯಕ್ಷ ನರೇಂದ್ರ ಧಾಬೋಲ್ಕರ್ ಪ್ರಕಟಿಸಿದ್ದಾರೆ.
ಪ್ರಸ್ತಾಪಿತ ಮಸೂದೆಯ ಬಗ್ಗೆ ಅಕ್ಷಮ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕರಡು ಮಸೂದೆಯ ಪರಿಶೀಲನೆಗೆ ನೇಮಿಸಿದ್ದ ಸಮಿತಿಯ ನೇತೃತ್ವ ವಹಿಸಿರುವ ಸಾಮಾಜಿಕ ನ್ಯಾಯ ಇಲಾಖೆ ಸಚಿವ ಚಂದ್ರಕಾಂತಸ ಹಂಡೋರ್ ಅವರು ಸದಸ್ಯರ ಬೇಡಿಕೆ ಹೊರತಾಗಿಯು ಕಳೆದ ಒಂಬತ್ತು ತಿಂಗಳಿಂದ ಸಮಿತಿಯ ಒಂದೇ ಒಂದು ಸಭೆಯನ್ನೂ ಕರೆದಿಲ್ಲ ಎಂದು ದೂಷಿಸಿದರು.
ಅಷ್ಟು ಮಾತ್ರವಲ್ಲದೆ, ಈ ಕಾನೂನು ಹಿಂದೂಗಳ ವಿರುದ್ಧವಾಗಿದೆ ಎಂದು ಹೇಳುವ ಸರಕಾರ ಈ ಪ್ರಸ್ತಾಪಿತ ಕಾಯಿದೆಯನ್ನು ಸಮರ್ಥಿಸಿಕೊಳ್ಳುವ ಗೋಜಿಗೂ ಹೋಗುತ್ತಿಲ್ಲ ಎಂದು ಅವರು ಆರೋಪಿಸಿದರು.
|