ಯುಪಿಎ ಸರಕಾರವು ವಿಶ್ವಾಸಮತ ಎದರಿಸಲು ಸಿದ್ಧವಾಗಿದೆ ಹಾಗೂ ಜುಲೈ 21 ಹಾಗೂ 22ರಂದು ಅಧಿವೇಶನ ನಡೆಸಲು ಯುಪಿಎ ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಎಡಪಕ್ಷಗಳ ಬೆಂಬಲ ಹಿಂತೆಗೆತದಿಂದ ಅಲ್ಪಸಂಖ್ಯಾತವಾಗಿರುವ ಆಡಳಿತಾರೂಢ ಮೈತ್ರಿ ಸರಕಾರದ ವಿಶ್ವಾಸಮತ ಯಾಚನೆಯ ಹಿನ್ನೆಲ್ಲೆಯಲ್ಲಿ, ಸೂಕ್ತ ರಾಜಕೀಯ ತಂತ್ರಗಳ ಕುರಿತು ಸಮಾಲೋಚಿಸಲು ಯುಪಿಎ ನಾಯಕರು ನಡೆಸಿರುವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಏತನ್ಮಧ್ಯೆ, ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, 'ಇದು ಮುನ್ನಡೆಯುವ ಸಮಯವಾಗಿದೆ' ಎಂದು ಹೇಳಿದ್ದಾರೆ.
ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಕೇಂದ್ರ ಸಚಿವರಾದ ಪ್ರಣಬ್ ಮುಖರ್ಜಿ, ಶಿವರಾಜ್ ಪಾಟೀಲ್, ಟಿ.ಆರ್.ಬಾಲು(ಡಿಎಂಕೆ), ಪ್ರಫುಲ್ ಪಟೇಲ್(ಎನ್‌ಸಿಪಿ), ಮತ್ತು ಪಿಡಿಪಿ ಮುಖ್ಯಸ್ಥ ಮೆಹಬೂಬ ಮುಫ್ತಿ ಅವರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ, ಜೆಎಂಎಂ ನಾಯಕ ಹೇಮಲಾಲ್ ಮಮ್ಮು ಅವರೂ ಸಭೆಯಲ್ಲಿ ಹಾಜರಿದ್ದರು.
|