ನೋಯ್ಡಾ ಜೋಡಿ ಕೊಲೆ ಪ್ರಕರಣ ಮೇಲೆ ಬಂಧನಕ್ಕೀಡಾಗಿರುವ ದಂತ ವೈದ್ಯ ರಾಜೇಶ್ ತಲ್ವಾರ್ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ ಎಂದು ಸಿಬಿಐನ ಜಂಟಿ ನಿರ್ದೇಶಕರಾದ ಅರುಣ್ ಕುಮಾರ್ ಹೇಳಿದ್ದಾರೆ.
"ನಮ್ಮ ತನಿಖೆಯ ಪ್ರಕಾರ ತಲ್ವಾರ್ ಸಹಾಯಕ ಕೃಷ್ಣ, ದುರ್ರಾನಿ ದಂಪತಿಗಳ ಮನೆಗೆಲಸದಾಳು ರಾಜ್‌ಕುಮಾರ್ ಮತ್ತು ವಿಜಯ್ ಮಂಡಲ್ ಎಂಬ ಇನ್ನೊರ್ವ ವ್ಯಕ್ತಿ ಪ್ರಮುಖ ಅಪರಾಧಿಗಳಾಗಿ ತೋರುತ್ತದೆ. ಡಾ|ತಲ್ವಾರ್ ವಿರುದ್ಧ ನಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲ, ಅದರೆ ಸದ್ಯಕ್ಕೆ ಅವರನ್ನು ನಾವು ಸಂಪೂರ್ಣ ದೋಷ ಮುಕ್ತರನ್ನಾಗಿಸುವುದಿಲ್ಲ." ಎಂದು ಅವರು ಪತ್ರಿಕಾಗೋಷ್ಠಯಲ್ಲಿ ತಿಳಿಸಿದ್ದಾರೆ.
ಸಿಬಿಐ ಈ ಎಲ್ಲ ಮಾಹಿತಿಗಳು ಸುಳ್ಳು ಪತ್ತೆ ಹಚ್ಚುವ ಮತ್ತು ಮಂಪರು ಪರೀಕ್ಷೆಯನ್ನು ಆಧರಿಸಿವೆ ಮತ್ತು ಯಾವುದೇ ರುಜುವಾತು ಮಾಡಬಲ್ಲಂತಹ ಸಾಕ್ಷಿಗಳು ತಮಗೆ ಸಿಕ್ಕಿಲ್ಲವೆಂದು ಸ್ಪಷ ಪಡಿಸಿದೆ.
ಏತನ್ಮಧ್ಯೆ, ಇನ್ನೊರ್ವ ಅಪಾದಿತ ವಿಜಯ್ ಮಂಡಲ್ ಎಂಬಾತನನ್ನು ಸಿಬಿಐ ಬಂಧಿಸಿ ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಿದೆ. ಇನ್ನೊಂದು ಕಡೆ ಡಾ.ರಾಜೇಶ್ ತಲ್ವಾರ್ ಅವರನ್ನು ನಿಯೋಜಿತ ಸಿಬಿಐ ನ್ಯಾಯಲಯದಲ್ಲಿ ಹಾಜರುಪಡಿಸಲಾಗಿದೆ ಮತ್ತು ಅವರು ಜಾಮೀನಿನಮೇಲೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಕೊಲೆಗೆ ಉಪಯೋಗಿಸಲಾದ ಆಯುಧಗಳು ನೋಯ್ಡದಲ್ಲಿವೆ ಮತ್ತು ಅವುಗಳನ್ನು ಮುಂದಿನ ಕೆಲ ದಿನಗಳಲ್ಲಿ ಪತ್ತೆಹಚ್ಚಲಾಗುವುದು ಎಂದು ಹೇಳಿರುವ ಸಿಬಿಐ ಮುಂದಿನ ವಾರ ಈ ಪ್ರಕರಣವು ಇತ್ಯರ್ಥಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಮೂಲಗಳು ಹೇಳಿವೆ.
|