ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ಸೇರಿದಂತೆ ಟಿಡಿಪಿ, ಎಜಿಪಿ ಮತ್ತು ಯುಎನ್‌ಪಿಎಯ ಎಂಟು ಸಂಸದರು ಜುಲೈ 22ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಯಾಚಿಸುವ ವಿಶ್ವಾಸ ಮತದ ವಿರುದ್ಧವಾಗಿ ಮತ ಚಲಾಯಿಸಲಿದ್ದಾರೆ.
ಪ್ರಸ್ತುತ ಟಿಡಿಪಿಯ 5 ಎಂಪಿಗಳು, ಎಜಿಪಿಯ 2, ಮತ್ತು ಜೆವಿಎಂನ ಓರ್ವ ಸದಸ್ಯ ಜುಲೈ 22ರಂದು ನಡೆಯಲಿರುವ ವಿಶ್ವಾಸ ಮತಯಾಚನೆ ಗೊತ್ತುವಳಿ ವಿರುದ್ಧವಾಗಿ ಮತ ಹಾಕಲಿದ್ದಾರೆ ಎಂದು ಟಿಡಿಪಿ ಸಂಸದೀಯ ಪಕ್ಷದ ನಾಯಕ ಯರ್ರನ್‌ನಾಯ್ಡು ತಿಳಿಸಿದ್ದಾರೆ. ಇದೀಗ ವಿಶ್ವಾಸ ಮತ ಗೆಲ್ಲಲು ಸರಕಾರಕ್ಕೆ ಕಷ್ಟವಾಗಲಿದೆ. ಒಂದು ವೇಳೆ ವಿಶ್ವಾಸಮತ ಗಳಿಕೆಯಲ್ಲಿ ಸಫಲರಾದರೂ, ಸಣ್ಣ ಪುಟ್ಟ ಪಕ್ಷಗಳು ಲಾಭದಾಯಕ ಸಚಿವ ಹುದ್ದೆ ಬಯಸಿದಲ್ಲಿ ಸರಕಾರಕ್ಕೆ ತೊಂದರೆ ತಪ್ಪಿದ್ದಲ್ಲ.
ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ಮುನ್ನ ಅಲ್ಪಮತದ ಸರಕಾರ ಯಾವುದೇ ನೀತಿ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಯುಎನ್‌ಪಿಎ ವಿರೋಧ ವ್ಯಕ್ತಪಡಿಸಿದೆ. ಪರಮಾಣು ಒಪ್ಪಂದದ ಬಿಕ್ಕಟ್ಟಿನಿಂದಾಗಿ ಎಡಪಕ್ಷಗಳ ತನ್ನ ಬೆಂಬಲ ಹಿಂತೆಗೆದುಕೊಂಡ ಬಳಿಕ ಸರಕಾರ ಅಲ್ಪಮತಕ್ಕಿಳಿದಿದ್ದು, ವಿಶ್ವಾಸಮತ ಯಾಚಿಸದೆ ಸರಕಾರ ಒಂದು ಹೆಜ್ಜೆಯನ್ನು ಮುಂದಿಡಲು ಸಾಧ್ಯವಿಲ್ಲ ಎಂದು ಯರ್ರನ್‌ನಾಯ್ಡು ಅಭಿಪ್ರಾಯ ಪಟ್ಟಿದ್ದಾರೆ.
ಐಎಇಎಯನ್ನು ಸಂಪರ್ಕಿಸುವ ಮುನ್ನ ವಿಶ್ವಾಸಮತ ಗಳಿಸುವುದಾಗಿ ಹೇಳಿದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರ ಭರವಸೆಯನ್ನು ಉಲ್ಲಂಘಿಸಿ ಐಎಇಎ ಮಂಡಳಿ ನಿರ್ದೇಶಕರಿಗೆ ಸುರಕ್ಷತಾ ದಾಖಲೆಯನ್ನು ಸಲ್ಲಿಸಿದ ಸರಕಾರದ ಕ್ರಮ ಅಸಾಂವಿಧಾನಿಕವಾದದು ಎಂದು ಟಿಡಿಪಿ ನಾಯಕರು ಆರೋಪಿಸಿದ್ದಾರೆ.
ದೇಶದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರ, ರೈತರ ಆತ್ಮಹತ್ಯೆ, ಆಹಾರದ ಕೊರತೆ ಮೊದಲಾದವುಗಳನ್ನು ಲೆಕ್ಕಿಸದೆ ಪ್ರಧಾನ ಮಂತ್ರಿಯವರು ಪರಮಾಣು ಒಪ್ಪಂದಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಯರ್ರನ್‌ರೆಡ್ಡಿ ಖಂಡಿಸಿದ್ದಾರೆ.
|