'ನನ್ನ ವೈರಿಯ ವೈರಿ ನನ್ನ ಸ್ನೇಹಿತ' ಎಂಬಂತೆ ಇದೀಗ ಯುಪಿಎಯ 'ವೈರಿ'ಗಳಾದ ಎಡಪಕ್ಷಗಳು ಮತ್ತು ಬಿಎಸ್ಪಿ, ಅಣುಒಪ್ಪಂದದ ಕುರಿತು ಕೈಜೋಡಿಸಲು ಮುಂದಾಗಿವೆ.
ಅಣುಒಪ್ಪಂದದಲ್ಲಿ ಮುಂದುವರಿಯುವ ಸೂಚನೆ ನೀಡಿದ ಯುಪಿಎ ಸರಕಾರಕ್ಕೆ ಸಾರ್ವಜನಿಕ ಬೆದರಿಕೆ ಹಾಕಿರುವ ಎಡಪಕ್ಷಗಳ ಧ್ವನಿಯಾಗಿರುವ ಪ್ರಕಾಶ್ ಕಾರಟ್, ಭಾನುವಾರ ಮಧ್ಯಾಹ್ನ ಬಿಎಸ್ಪಿ ವರಿಷ್ಠೆ ಮಾಯಾವತಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರ ಈ ಮಾತುಕತೆ ವೇಳೆ ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಹೊರಗೆ ಕಾಂಗ್ರೆಸ್ ನೇತೃತ್ವದ ಯುಪಿಎಯನ್ನು ಎದುರಿಸಲು ಸಂಬಂಧ ಒಂದಕ್ಕೆ ಆಕಾರ ನೀಡಲಾಗಿದೆ. ಬಿಎಸ್ಪಿ ಮತ್ತು ಎಡಪಕ್ಷಗಳು ಅಂತಹ ಸೌಹಾರ್ದತೆಯನ್ನೇನು ಹೊಂದಿರದಿದ್ದರೂ ಇದೀಗ 'ಸಮಾನ ಉದ್ದೇಶ'ಕ್ಕಾಗಿ ಒಂದಾಗಿವೆ.
ಯುಪಿಎಯ ನೀತಿಗಳ ವಿರದ್ಧವಾಗಿ ಎಡಪಕ್ಷಗಳು ಮತ್ತು ಬಹುಜನ ಸಮಾಜವಾದಿ ಪಕ್ಷ ಕೈಜೋಡಿಸಿರುವುದಾಗಿ ಕಾರಟ್ ಸಭೆಯ ಬಳಿಕ ಸುದ್ದಿಗಾರರೊಂದಿದೆ ಮಾತನಾಡುತ್ತಾ ನುಡಿದರು. ಅಣು ಒಪ್ಪಂದದ ಕುರಿತು ಮಾಯಾವತಿಯವರ ನಿಲುವನ್ನು ಶ್ಲಾಘಿಸಿದ ಕಾರಟ್, ಇದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳನ್ನು ಬೆಂಬಲಿಸಲು ಮಾಯಾವತಿ ಒಪ್ಪಿದ್ದಾರೆಂದು ನುಡಿದರು.
ಉಭಯ ಪಕ್ಷಗಳು ಸೇರಿ ಭಾರತ-ಅಮೆರಿಕ ಅಣುಒಪ್ಪಂದವನ್ನು ಸೋಲಿಸುತ್ತೇವೆ ಎಂಬ ವಿಶ್ವಾಸವನ್ನು ಕಾರಟ್ ವ್ಯಕ್ತಪಡಿಸಿದರು. ಈ ಒಪ್ಪಂದವು ಅಲ್ಪಸಂಖ್ಯಾತರ ವಿರೋಧಿ ಎಂದು ಈ ಹಿಂದೆ ಮಾಯಾವತಿ ಬಣ್ಣಿಸಿದ್ದರು.
|