ಅಣುಒಪ್ಪಂದದ ಕುರಿತು 'ದ್ರೋಹ' ಎಸಗಿರುವ ಯುಪಿಎ ಸರಕಾರದಿಂದ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿರಬಹುದು. ಆದರೆ, ಮುಂದಿನ ಲೋಕಸಭಾ ಚುನಾವಣೆಗಳ ಬಳಿಕ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಸರಕಾರಕ್ಕೆ ಆಗಿನ ಸ್ಥಿತಿಗತಿಗಳ ಆಧಾರದ ಮೇಲೆ ಎಡಪಕ್ಷಗಳು ಮತ್ತೆ ಬೆಂಬಲ ನೀಡುವ ಸಾಧ್ಯತೆ ಇದೆ.
'ಪ್ರಸಕ್ತ ಅನುಭವವು ಒಂದು ಕರಿನೆರಳು' ಎಂದು ಹೇಳಿರುವ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಸಿತಾರಾಮ ಯಚೂರಿ, 'ಸಂದರ್ಭಗಳು ಮತ್ತು ನೀತಿಗಳ' ಆಧಾರದಲ್ಲಿ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಬೆಂಬಲವು ಅವರು ಅನುಸರಿಸುವ ನೀತಿಯನ್ನು ಅವಲಂಭಿಸಿದೆ. ಈಗಿನಂತೆ ವಂಚಿಸದೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಒಂದನ್ನು ಅನುಸರಿಸಿದಲ್ಲಿ ಈ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅವರು ಕರಣ್ ಥಾಪರ್ ಅವರ ಡೆವಿಲ್ಸ್ ಅಡ್ವೊಕೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ನುಡಿದರು.
ಸರಕಾರವು ಐಎಇಎ ಒಪ್ಪಂದದಲ್ಲಿ ಮುಂದುವರಿದಿರುವುದು ಒಂದು ಕರಾಳ ಅನುಭವ ಎಂದು ನುಡಿದಿರುವ ಅವರು ಎಡಪಕ್ಷಗಳು ನಾಲ್ಕು ವರ್ಷಗಳ ಕಾಲ ಯುಪಿಎ ಸರಕಾರಕ್ಕೆ ಬೆಂಬಲ ನೀಡಿದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಅಣುಒಪ್ಪಂದ ಸೇರಿರಲಿಲ್ಲ ಎಂದು ತಿಳಿಸಿದರು.
ಕೆಲವು ದಿನಗಳ ಹಿಂದೆ ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಅವರೂ ಇದೇ ದನಿಯಲ್ಲಿ ಮಾತನಾಡಿದ್ದು, ಮತೀಯ ಶಕ್ತಿಗಳ ವಿರುದ್ಧ ಹೊರಾಡುವ ನಿಟ್ಟಿನಲ್ಲಿ ಮುಂದಿನ ಚುನಾವಣೆ ವೇಳೆ ಎಡಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲ ನೀಡುವುದರಿಂದ ಹಿಂಜರಿಯವು ಎಂದು ಹೇಳಿದ್ದರು. ಆದರೆ, ಮನಮೋಹನ್ ಸಿಂಗ್ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡದು ಎಂಬ ಸುಳಿವು ನೀಡಿದ್ದರು.
|