ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು "ಪಕ್ಷ ರಹಿತ ಪದವಿ" ಹೊಂದಿರುವುದರಿಂದ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸಿಪಿಎಂನ ಹಿರಿಯ ನಾಯಕರಾಗಿರುವ ಚಟರ್ಜಿ, ಎಡಪಕ್ಷಗಳು ಮನಮೋಹನ್ ಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ತಮ್ಮ ಪದವಿಗೆ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ನಡುವೆ ಕಾಂಗ್ರೆಸ್‌ನಿಂದ ಸೋಮವಾರ ಈ ಪ್ರತಿಕ್ರೀಯೆ ವ್ಯಕ್ತವಾಗಿದೆ.
ವರದಿಗಾರರೊಂದಿಗೆ ಮಾತನಾಡುತ್ತಿದ್ದ ಎಐಸಿಸಿ ವಕ್ತಾರ ಅಭಿಷೇಕ್ ಮಾನು ಸಿಂಗ್ವಿ, ಕಾಂಗ್ರೆಸ್ ಚಟರ್ಜಿ ಅವರ ರಾಜೀನಾಮೆಯನ್ನು ಬಯಸುತ್ತದೆಯೆ ಎಂದು ಕೇಳಿದ ಪ್ರಶ್ನೆಗೆ, "ಇದು ಸಿಪಿಎಂ ತೀರ್ಮಾನ ಹಾಗೂ ಚಟರ್ಜಿ ಅವರ ವೈಯಕ್ತಿಕ ನಿರ್ಣಯಕ್ಕೆ ಬಿಟ್ಟ ವಿಷಯ," ಎಂದು ಉತ್ತರಿಸಿದರು.
|