ಕಾರ್ಪೋರೇಟ್ ಜಗತ್ತಿನ ದಿಗ್ಗಜ ಸಹೋದರರಾದ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ನಡುವಣ ಭಿನ್ನಾಭಿಪ್ರಾಯ ಪರಿಹಾರದಲ್ಲಿ ಪ್ರಧಾನಿಯವರ ಮಧ್ಯಪ್ರವೇಶ ವಿಚಾರವನ್ನು ಪ್ರಧಾನಮಂತ್ರಿ ಕಚೇರಿ ಅಲ್ಲಗಳೆದಿದೆ.
ಮುಖೇಶ್ ಅಂಬಾನಿ ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಈ ಕುರಿತಂತೆ ಎದ್ದಿರುವ ಉಹಾಪೋಹಗಳನ್ನು ಶಮನಗೊಳಿಸಲು ಪ್ರಧಾನಿಯವರ ಮಾಧ್ಯಮ ಸಲಹಾಗಾರ ಸಂಜಯ್ ಬಾರು ನೀಡಿರುವ ಹೇಳಿಕೆಯಲ್ಲಿ "ಪ್ರಧಾನಿಯವರು, ರಾಷ್ಟ್ರದ ಆರ್ಥಿಕ ವಿಚಾರಗಳ ಕುರಿತು ಚರ್ಚಿಸಲು ಆಗೀಗ ಉದ್ಯಮಿಗಳನ್ನು ಭೇಟಿಯಾಗುತ್ತಿರುತ್ತಾರೆ. ಡಾ| ಮನ್‌ಮೋಹನ್ ಸಿಂಗ್ ಅವರು ಕಾರ್ಪೋರೇಟ್ ವ್ಯವಹಾರಗಳಲ್ಲಿ ಮೂಗು ತೂರಿಸಲಾರರು ಎಂಬುದಾಗಿ ಭಾರತದ ಜನತೆಗೆ ತಿಳಿದಿದೆ" ಎಂದು ತಿಳಿಸಿದ್ದಾರೆ.
ಮುಖೇಶ್ ಅಂಬಾನಿ ಸೋಮವಾರ ಪ್ರಧಾನಿಯವರಲ್ಲದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪೆಟ್ರೋಲಿಯಂ ಸಚಿವ ಮುರಳಿ ದೇವೊರ, ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಸೇರಿದಂತೆ ಇತರ ಹಿರಿಯ ಅಧಿರಕಾರಿಗಳನ್ನು ಭೇಟಿಯಾಗಿದ್ದರು.
ಪ್ರಧಾನಿಯವರು ಅಂಬಾನಿಗಳ ಉದ್ಯಮ ಯುದ್ಧದಲ್ಲಿ ಮಧ್ಯಪ್ರವೇಶಿಸಬೇಕು ಎಂಬುದಾಗಿ ಸಮಾಜವಾದಿ ಪಕ್ಷದ ನಾಯಕ ಅಮರ್‌ಸಿಂಗ್ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಖೇಶ್ ಅವರ ಪ್ರಧಾನಿ ಭೇಟಿಯು ಮಹತ್ವ ಪಡೆದುಕೊಂಡಿದೆ.
ಅಮರ್ ಸಿಂಗ್ ಮುಖೇಶ್ ಅಂಬಾನಿಯವರ ತಮ್ಮ ಅನಿಲ್ ಅಂಬಾನಿಯವರಿಗೆ ನಿಕಟವಾಗಿದ್ದಾರೆ. ಅನಿಲ್ ಪೆಟ್ರೋಲಿಯಂ ಕಂಪೆನಿಗಳ ರಫ್ತಿನ ಮೇಲೆ ಡಬ್ಲ್ಯುಪಿಟಿ ತೆರಿಗೆ ಹೇರಲು ಕೋರಿದ್ದಾರೆನ್ನಲಾಗಿದ್ದು, ಇದು ಮುಖೇಶ್ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಅಮರ್ ಸಿಂಗ್ ಅವರ ಸಮಾಜವಾದಿ ಪಕ್ಷವು ಸಂಕಷ್ಟದಲ್ಲಿರುವ ಯುಪಿಎ ಸರಕಾರಕ್ಕೆ ಬೆಂಬಲ ಘೋಷಿಸಿದೆ.
|