ಸಂಸತ್ತಿನಲ್ಲಿ ಯುಪಿಎ ಸರಕಾರ ವಿಶ್ವಾಸಮತ ಯಾಚಿಸಲು ಇನ್ನು ಏಳುದಿನಗಳು ಮಾತ್ರ ಉಳಿದಿರುವಂತೆ, ರಾಜಕೀಯ ಪಕ್ಷಗಳೊಳಗೆ ತುರುಸಿನ ಕಾರ್ಯಾಚರಣೆಗಳು ನಡೆಯುತ್ತಿದ್ದು, 'ಕುದುರೆ ವ್ಯಾಪಾರ' ಭಾರೀ ಜೋರಿನಲ್ಲಿ ನಡೆಯುತ್ತಿದೆ.
ಇದೀಗ ಸಣ್ಣಪುಟ್ಟ ಪಕ್ಷಗಳೆಲ್ಲ ಇನ್ನಿಲ್ಲದ ಮಹತ್ವ ಪಡೆದಿದ್ದು, ಎಲ್ಲರೂ ಲಾಭಾವಕಾಶವನ್ನು ಬಾಚಿಕೊಳ್ಳುವಲ್ಲಿ ಸ್ಫರ್ಧೆಗೆ ಬಿದ್ದಿದ್ದಾರೆ. ಐದು ಸದಸ್ಯ ಸಂಖ್ಯೆಯ ಜೆಎಂಎಂ ತನ್ನ ಮುಖ್ಯಸ್ಥ ಶಿಬು ಸೊರೇನ್ ಅವರನ್ನು ಮತ್ತೆ ಮಂತ್ರಿ ಮಾಡಿದಲ್ಲಿ ಸರಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.
ಒಂದೊಮ್ಮೆ ಜೆಎಂಎಂ ವಿರೋಧಿಗಳೊಂದಿಗೆ ಕೈ ಜೋಡಿಸಿದಲ್ಲಿ ಸರಕರಾದ ಪರಿಸ್ಥಿತಿ ಕಷ್ಟಕ್ಕೀಡಾಗಲಿದೆ. ಮನಮೋಹನ್ ಸಂಪುಟದಲ್ಲಿ ಕಲ್ಲಿದ್ದಲು ಸಚಿವರಾಗಿದ್ದ, ಶಿಬುಸೊರೇನ್ ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ವಾರಂಟ್ ಪಡೆದಿದ್ದ ಕಾರಣ ತನ್ನ ಸಚಿವ ಸ್ಥಾನ ಕಳೆದುಕೊಂಡಿದ್ದರು.
ಶಿಬುಸೊರೇನ್ ಅವರನ್ನು ದೆಹಲಿ ಹೈಕೋರ್ಟ್ 2007ರ ಆಗಸ್ಟ್ ತಿಂಗಳಲ್ಲಿ ದೋಷಮುಕ್ತವಾಗಿಸಿತ್ತು. ಆದರೂ ಯುಪಿಎ ಸರಕಾರವು ತನ್ನ ಸಂಪುಟವನ್ನು ಕೊನೆಯ ಬಾರಿಗೆ ವಿಸ್ತರಿಸಿದಾಗಲೂ ಶಿಬು ಸ್ಥಾನ ಪಡೆದಿರಲಿಲ್ಲ. ಇದೀಗ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
|