ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರ 'ದಲ್ಲಾಲ್ ಸಲಾಮ್' ಟೀಕೆಯಿಂದ ವಿಚಲಿತರಾಗಿರುವ ಸಮಾಜವಾದಿ ಪಕ್ಷದ ಅಮರ್ ಸಿಂಗ್, ಮಂಗಳವಾರ ಇದಕ್ಕೆ ತಿರುಗೇಟು ನೀಡಿದ್ದು, ಈ ದಳ್ಳಾಳಿಯನ್ನೇ ಬಿಜೆಪಿ ಎರಡು ಬಾರಿ ಸಂಧಿಸಿತ್ತು. ಅದರಲ್ಲೂ ಒಮ್ಮೆ ತೀರಾ ಇತ್ತೀಚೆಗಷ್ಟೆ ಯುಪಿಎ ಸರಕಾರ ಉರುಳಿಸುವ ಸಲುವಾಗಿ ಬಿಜೆಪಿ ಸಂಪರ್ಕಿಸಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಅಡ್ವಾಣಿ ಅವರು ಇತ್ತಿಚೆಗೆ, ಕಾಂಗ್ರೆಸ್ ಎಡಪಕ್ಷಗಳೊಂದಿನ ಸಂಬಂಧವನ್ನು ಕಡಿದುಕೊಂಡು ಸಮಾಜವಾದಿ ಪಕ್ಷದೊಂದಿಗೆ ಮರುಮೈತ್ರಿಗೆ ಮುಂದಾದಾಗ, ಕಾಂಗ್ರೆಸ್ 'ಲಾಲ್ ಸಲಾಮ್' ಅನ್ನುವುದನ್ನು ನಿಲ್ಲಿಸಿ 'ದಲಾಲ್ ಸಲಾಮ್' ಎನ್ನಲು ಶುರುವಿಟ್ಟುಕೊಂಡಿದೆ ಎಂದು ಟೀಕಿಸಿದ್ದರು. ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳನ್ನು ಹತ್ತಿರಕ್ಕೆ ತರುವುದರಲ್ಲಿ ಅಮರ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.
ಅಡ್ವಾಣಿ ಅವರು ತಮ್ಮ ಭಾಷಣದಲ್ಲಿ ತನ್ನ ಹೆಸರನ್ನು ಬಳಸಿದ್ದಕ್ಕೆ ತಾನು 'ಋಣಿಯಾಗಿದ್ದೇನೆ' ಎಂದ ಅಮರ್ ಸಿಂಗ್, ಈ ಪ್ರಕ್ರಿಯೆಯಲ್ಲಿ ತಾನು ನಿಂದೆಗೆ ಒಳಗಾಗಿದ್ದರೂ ಅದನ್ನು ಆಶೀರ್ವಾದವೆಂದು ಪರಿಗಣಿಸುವುದಾಗಿ ಹೇಳಿದ್ದಾರೆ.
ಈ ಹಿಂದೆ ಅಡ್ವಾಣಿ ಅವರನ್ನು "ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ಗಿಂತ ಅಪಾಯಕಾರಿ" ಎಂದು ನೀಡಿದ್ದ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಅಮರ್ ಸಿಂಗ್, ಅದು ವೈಯಕ್ತಿಕ ಹೇಳಿಕೆಯಲ್ಲ, "ನಾನು ನಿಜವಾಗಿ ಅಡ್ವಾಣಿ ಅವರನ್ನು ಗೌರವಿಸುತ್ತೇನೆ" ಎಂದು ನುಡಿದರು.
ಅರ್ಎಸ್ಎಸ್, ಎಡಪಕ್ಷಗಳ ಮೇಲೆ ಹೊಗಳಿಕೆಯ ಮಳೆಗರೆದಿರುವುದನ್ನು ಪ್ರಸ್ತಾಪಿಸಿದ ಅವರು, ಇದೇ ಸಂಸ್ಥೆ ಎಸ್‌ಪಿಯ ಮುಲಾಯಂ ಸಿಂಗ್‌ರ ಸೋನಿಯಾ ಗಾಂಧಿ ವಿರೋಧಿ ಧೋರಣೆಯನ್ನು ಈ ಹಿಂದೆ ಶ್ಲಾಘಿಸಿತ್ತು ಎಂದು ನೆನಪಿಸಿದ್ದು, "ಅರ್ಎಸ್ಎಸ್‌ನ ಈ ಶ್ಲಾಘನೆ ಬಹಳ ಅಪಾಯಕಾರಿ" ಎಂದೂ ದೂರಿದರು.
|