ಅಣು ಒಪ್ಪಂದಕ್ಕೆ ತನ್ನ ಸಂಪೂರ್ಣ ಬೆಂಬಲ ಸೂಚಿಸಿರುವ ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸವನ್ನು ಪುನರುಚ್ಚರಿಸಿದ್ದಾರೆ.
"ಅದು ರಾಷ್ಟ್ರದ ಹಿತಾಸಕ್ತಿಯ ವಿಚಾರವಾಗಿದ್ದಲ್ಲಿ ಸಂಖ್ಯೆಯು ದೊಡ್ಡ ವಿಚಾರವಲ್ಲ. ಅವರು (ಯುಪಿಎ ನಾಯಕತ್ವ) ಅಪಾಯಕ್ಕೊಡ್ಡಿಕ್ಕೊಳ್ಳುತ್ತಿದ್ದಾರೆ. ಆದರೆ ಅದು ರಾಷ್ಟ್ರದ ಒಳಿತಿಗೆ ಸಂಬಂಧಿಸಿದಾದಲ್ಲಿ, ಇಂತಹ ಅಪಾಯವನ್ನು ಮತ್ತೆ , ಮತ್ತೆ, ಮತ್ತೆ ತೆಗೆದುಕೊಳ್ಳಲು ನಾನು ಹೇಳುತ್ತೇನೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ಅಮೇಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು "ಅಣುಒಪ್ಪಂದವು ಒಂದು ಅಪರೂಪದ ಒಪ್ಪಂದವಾಗಿದ್ದು, ಇದರಿಂದ ರಾಷ್ಟ್ರಕ್ಕೆ ಒಳಿತಾಗಲಿದೆ" ಎಂದು ಅವರು ನುಡಿದರು.
ಇದಕ್ಕೆ ಸಂಬಂಧಿಸಿದಂತೆ ತಾನು ಪ್ರಧಾನಿಯವರನ್ನು ನೂರು ಶೇಕಡಾ ಬೆಂಬಲಿಸುವುದಾಗಿ ಹೇಳಿರುವ ರಾಹುಲ್, ಸರಕಾರ ವಿಶ್ವಾಸಮತ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, ಒಂದೊಮ್ಮೆ ಸರಕಾರ ಬಿದ್ದರೂ ತಾನು ಪ್ರಧಾನಿಯವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಪ್ರಧಾನಿಯವರು ಓರ್ವ ಗೌರವಾನ್ವಿತ ನಾಯಕ, ಅವರು ದೂರದೃಷ್ಟಿ, ಪ್ರಭುದ್ಧತೆ ಮತ್ತು ನಾಯಕತ್ವವನ್ನು ತೋರಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಅಣುಒಪ್ಪಂದಕ್ಕೆ ವ್ಯಕ್ತವಾಗಿರುವ ವಿರೋಧಗಳು ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನ ತಂದೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು 80ರ ದಶಕದಲ್ಲಿ ಕಂಪ್ಯೂಟರ್ ಜಾರಿಗೆ ತರಲು ನಿರ್ಧರಿಸಿದಾಗಲೂ ಇಂತಹುದೇ ವಿರೋಧಗಳು ವ್ಯಕ್ತವಾಗಿದ್ದವು, ಕಂಪ್ಯೂಟರ್‌ಗಳು ರೈತರಿಗೆ ಹೇಗೆ ಪ್ರಯೋಜನವಾಗಬಲ್ಲುದು ಎಂಬ ಪ್ರಶ್ನೆಗಳು ಆಗಿನ ಕಾಲದಲ್ಲಿ ಉದ್ಭವವಾಗಿದ್ದವು ಎಂದು ನುಡಿದರು.
ಸರಕಾರ ವಿಶ್ವಾಸ ಮತ ಗೆಲ್ಲುವುದೇ ಎಂದು ಕೇಳಿದ ಪ್ರಶ್ನೆಗೆ, ತಾನೇನನ್ನೂ ಊಹಿಸಲಾರೆ, ಜು.22ರ ತನಕ ಕಾಯೋಣ, ಅಮೇಲೇನಾಗುತ್ತದೋ ಮತ್ತೆ ನೋಡೋಣ ಎಂದು ಉತ್ತರಿಸಿದರು.
|