ಒರಿಸ್ಸಾದ ಮಾಲ್ಕನ್‌ಗಿರಿ ಜಿಲ್ಲೆಯಲ್ಲಿ ನಕ್ಸಲರು ಹೊಂಚುದಾಳಿ ನಡೆಸಿದ್ದು ಕನಿಷ್ಠ 24 ಪೊಲೀಸರು ಹತರಾಗಿದ್ದಾರೆ. ಈ ದುರ್ಘಟನೆ ಭುವನೇಶ್ವರದಿಂದ ದಕ್ಷಿಣಕ್ಕೆ 600 ಕಿ.ಮೀ ದೂರದಲ್ಲಿ ಸಂಭವಿಸಿದೆ.
ಕಾಲಿಮೇಲ-ಮೋಟು ಎಂಬ ರಸ್ತೆಯಲ್ಲಿ ವಿಶೇಷ ಕಾರ್ಯಪಡೆ ತಂಡದ ಸದಸ್ಯರು ಸಾಗುತ್ತಿದ್ದ ವೇಳೆ ರಸ್ತೆಯಲ್ಲಿ ಹುಡುಗಿಡಲಾಗಿದ್ದ ಬಾಂಬ್ ಸ್ಫೋಟಿಸಿದ್ದು ಈ ದುರಂತ ಸಂಭವಿಸಿದೆ. ಸತ್ತವರಲ್ಲಿ ಇಬ್ಬರು ಪೊಲೀಸ್ ಇನ್ಸೆಪೆಕ್ಟರ್‌ಗಳೆಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ರಸ್ತೆಗೆ ಅಡ್ಡವಾಗಿ ಮರವನ್ನು ಉರುಳಿಸಿ ಪೊಲೀಸ್ ವಾಹನವನ್ನು ಅಡ್ಡಗಟ್ಟಿದ ನಕ್ಸಲರು, ರಸ್ತೆ ತೆರವುಗೊಳಿಸಲು ಅಧಿಕಾರಿಗಳು ವಾಹನದಿಂದ ಕೆಳಗಿಳಿದ ವೇಳೆ ಅವರಮೇಲೆ ಗುಂಡು ಹಾರಿಸಿದರು. ಅಷ್ಟರಲ್ಲೇ ನೆಲಬಾಂಬು ಸಿಡಿಯಿತು ಎಂದು ವರದಿಗಳು ಹೇಳಿವೆ.
ಹದಿನೆಂಟು ದಿನಗಳ ಹಿಂದೆ ಮಾಲ್ಕನ್‌ಗಿರಿ ಜಿಲ್ಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಆಂಧ್ರ ಹಾಗೂ ಒರಿಸ್ಸಾ ಪೊಲೀಸ್ ಪಡೆಯ 35 ಪೊಲೀಸರು ನಕ್ಸಲರನ್ನು ಗುಂಡಿಟ್ಟು ಕೊಂದಿದ್ದರು. ಈ ಘಟನೆ ಮಾಯುವ ಮುನ್ನವೇ ನಕ್ಸಲರ ಅಟ್ಟಹಾಸ ಮರುಕಳಿಸಿದೆ.
|