ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ, ಯುಪಿಎ ಸರಕಾರಕ್ಕೆ ತಮ್ಮ ಪಕ್ಷ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ಸಂಸದರು ಪಕ್ಷ ತೊರೆದಿಲ್ಲ ಎಂದು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ಪಕ್ಷದ ವಿರುದ್ಧ ಸುದ್ದಿಗಳನ್ನು ಹರಿಬಿಡುತ್ತಿರುವವರು ಪಕ್ಷ ತೊರೆದು ಮೂರು ತಿಂಗಳು ಕಳೆಯಿತು ಎಂದು ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ಯಾವುದೇ ಸಂಸದರೂ ಪಕ್ಷ ತ್ಯಜಿಸಿಲ್ಲ ಎಂದು ಪುನರುಚ್ಚರಿಸಿದ ಅವರು, ಅಣು ಅಪ್ಪಂದದ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿರುವ ಮುನಾವ್ವರ್ ಹಸನ್ ಮತ್ತು ಜೈ ಪ್ರಕಾಶ್ ರಾವತ್ ಅವರುಗಳು ಪಕ್ಷ ತೊರೆದು ಈಗಾಗಲೇ ಮೂರು ತಿಂಗಳು ಕಳೆದಿದೆ ಎಂದು ನುಡಿದರು.
ಅಂತೆಯೇ ಅಣುಒಪ್ಪಂದದ ವಿರುದ್ಧ ಧ್ವನಿ ಎತ್ತಿರುವ ಇನ್ನೋರ್ವ ಸಂಸದ ರಾಜನಾರಾಯಣ್ ಬುಧೋಳಿಯ ಅವರನ್ನು ತುಂಬ ಹಿಂದೆಯೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮುನಾವ್ವರ್ ಹಸನ್‌ಗೆ 25 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂಬ ವದಂತಿಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷವು ಎಂದಿಗೂ ಇಂತಹ ಕಾರ್ಯಗಳಿಗೆ ಮುಂದಾಗುವುದಿಲ್ಲ ಎಂದು ನುಡಿದರು.
ಏತನ್ಮಧ್ಯೆ, ಅಣುಒಪ್ಪಂದದಿಂದಾಗಿ ರಾಷ್ಟ್ರದ ವಿದೇಶಾಂಗ ನೀತಿ ಹಾಗೂ ಸಾರ್ವಭೌಮತೆಗೆ ಧಕ್ಕೆಯಾಗುವುದನ್ನು ಪಕ್ಷವು ಸಹಿಸುವುದಿಲ್ಲ ಎಂದು ಪ್ರಧಾನಿ ಸಿಂಗ್ ಅವರಿಗೆ ಸ್ಪಷ್ಟಪಡಿಸಿರುವುದಾಗಿ ಮುಲಾಯಂ ನುಡಿದರು.
|