ಮುಂಬರುವ ಜುಲೈ 22ರಂದು ವಿಶ್ವಾಸಮತ ಕೋರಿಕೆಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅವಕಾಶವಾದಿಗಳೊಂದಿಗೆ ಕೈ ಜೋಡಿಸುತ್ತಿರುವ ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಯಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಹೇಳಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವಿನ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಸರಕಾರದಲ್ಲಿ ತಲೆದೋರಿದ ಬಿಕ್ಕಟ್ಟು ಮತ್ತು ಯುಪಿಎ ಸರಕಾರದಿಂದ ಎಡರಂಗಗಳ ಬೆಂಬಲ ಹಿಂತೆಗೆತ ಮೊದಲಾದ ಬಗ್ಗೆ ವಿವರಣೆ ನೀಡುವ ಸಲುವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಾ ಕಾರಟ್ ಅವರು, ಕಾಂಗ್ರೆಸ್ ಪಕ್ಷವು ಅವಕಾಶವಾದಿಗಳೊಂದಿಗೆ ಕೈ ಜೋಡಿಸಿದ್ದಕ್ಕಾಗಿ ಹಾಗೂ ಸಾಮಾನ್ಯ ಕನಿಷ್ಠಾಂಶಗಳ ಕಾರ್ಯಕ್ರಮದಿಂದ ವಿಮುಖವಾಗಿರುವುದಕ್ಕಾಗಿ ಜನರು ತಕ್ಕ ಶಿಕ್ಷೆ ನೀಡಿಯೇ ನೀಡುತ್ತಾರೆ ಎಂಬುದಾಗಿ ಹೇಳಿದರು.
ಈ ಮೊದಲು ಅಣು ಒಪ್ಪಂದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಪಕ್ಷಗಳು ಇದೀಗ ಕಾಂಗ್ರೆಸ್‌ನ ವಿಶ್ವಾಸಮತ ಗೊತ್ತುವಳಿಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಮುಂದಾಗುತ್ತಿರುವುದನ್ನು ಕಾರಟ್ ಟೀಕಿಸಿದರು. ಇಂತಹ ಪಕ್ಷಗಳು ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದಕ್ಕೆ ಬೆಂಬಲ ಸೂಚಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿವೆ. ಇದಕ್ಕೆ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಸೂಕ್ತ ಉದಾಹರಣೆ ಎಂಬುದಾಗಿ ಅವರು ಹೇಳಿದರು.
ಈ ಮೊದಲು ಪರಮಾಣು ಒಪ್ಪಂದವನ್ನು ವಿರೋಧಿಸಿದ್ದ ಸಮಾಜವಾದಿ ಪಕ್ಷವು, ಎಡರಂಗಗಳು ಯುಪಿಎಗೆ ಬೆಂಬಲ ಹಿಂತೆಗೆದುಕೊಂಡ ಕ್ಷಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಒಪ್ಪಂದದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಸಹಕಾರ ಘೋಷಿಸಿತ್ತು.
ಏತನ್ಮಧ್ಯೆ, ಯುಪಿಎ ಸರಕಾರವು ಎಡರಂಗದ ಬಾಹ್ಯ ಬೆಂಬಲವಿದ್ದಾಗ ಮಾತ್ರ "ವಿಶ್ವಾಸಾರ್ಹತೆ"ಗೆ ಪಾತ್ರವಾಗಿತ್ತು ಎಂದು ಕಾರಟ್ ಅಭಿಪ್ರಾಯ ಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವನ್ನು "ಮುಳುಗುತ್ತಿರುವ ನೌಕೆ" ಎಂದು ಬಣ್ಣಿಸಿದ ಕಾರಟ್, ಇದೀಗ ಯುಪಿಎಯೊಂದಿಗೆ ಸೌಹಾರ್ದತೆ ಬೆಳೆಸಿಕೊಂಡಿರುವವರು ಆದಷ್ಟು ಬೇಗನೆ ನೌಕೆಯಿಂದ ಜಿಗಿದು ಎಡರಂಗಗಳೊಡನೆ ಸೇರಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವಂತೆ ಅವರು ಕರೆ ನೀಡಿದರು. ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ಪರ್ಯಾಯ ಶಕ್ತಿಯೊಂದನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯ ಎಂದು ಕಾರಟ್ ವಿಶ್ವಾಸ ವ್ಯಕ್ತಪಡಿಸಿದರು.
|