ಬೇಕಿದ್ದರೆ ಬೆಂಬಲ ಹಿಂತೆಗೆದುಕೊಳ್ಳಿ, ಅಣು ಒಪ್ಪಂದದಲ್ಲಿ ಮುಂದುವರಿದೇ ಸಿದ್ಧ ಎಂದು ಎಡಪಕ್ಷಗಳಿಗೆ ಸಂದೇಶ ನೀಡಿ ಯುಪಿಎ ಸ್ವೀಕರಿಸಿದ್ದ ಸವಾಲಿನಲ್ಲಿ ಯಶ ಸಾಧಿಸುವುದು ಅಷ್ಟು ಸುಲಭ ಎಂಬ ಲಕ್ಷಣಗಳು ಈಗ ಮರೆಯಾಗುತ್ತಿವೆ. ಇತರ ಸಣ್ಣ ಪುಟ್ಟ ಪಕ್ಷಗಳು ಕಾಂಗ್ರೆಸ್ಸನ್ನು ಆಟ ಆಡಿಸುತ್ತಿರುವುದರ ಹೊರತಾಗಿ, ಸ್ವಪಕ್ಷೀಯರಿಂದಲೂ ಅದು ಸಮಸ್ಯೆ ಎದುರಿಸುತ್ತಿದೆ.
ಟಿವಿ ನ್ಯೂಸ್ ಚಾನೆಲ್‌ಗಳ ಕ್ಯಾಮರಾಗಳೆದುರು ನಗುಮುಖದಲ್ಲೇ 'ವಿಶ್ವಾಸ ಮತ ಗೆಲ್ಲುತ್ತೇವೆ' ಎಂಬ ವಿಶ್ವಾಸಭರಿತ ಸಂದೇಶ ನೀಡುತ್ತಿರುವ ಕಾಂಗ್ರೆಸ್ ನಾಯಕರು ಒಳಗಿಂದೊಳಗೇ ಆತಂಕ ಎದುರಿಸುತ್ತಿದ್ದಾರೆ. ಜು.22ರ ವಿಶ್ವಾಸಮತ ನಿರ್ಣಯದಲ್ಲಿ ಪಾರಾಗುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಅವರ ಅರಿವಿಗೆ ಬಂದಿರುವುದೇ ಇದಕ್ಕೆ ಪ್ರಧಾನ ಕಾರಣ.
ಜು.15ರವೇಳೆಗೆ, ತಮ್ಮಲ್ಲಿ ಯುಪಿಎಯ 260 ಸದಸ್ಯ ಬಲವಿದೆ, ಬಹುಮತ ಸಾಬೀತಿಗೆ ಇನ್ನೂ ಬೇಕಾಗಿರುವ 11 ಮಂದಿಯನ್ನು ಒಟ್ಟುಗೂಡಿಸುವುದು ಕಷ್ಟವೇನಲ್ಲ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ಗೆ, ಸಣ್ಣ ಪುಟ್ಟ ಪಕ್ಷಗಳ, ಏಕ ಸದಸ್ಯ ಪಕ್ಷಗಳ ಸದಸ್ಯರು ಕಣ್ಣಾ ಮುಚ್ಚಾಲೆಯಾಡುತ್ತಿರುವುದು ನುಂಗಲಾರದ ತುತ್ತಾಗಿರುವುದರೊಂದಿಗೆ, ಸ್ವತಃ ತಮ್ಮದೇ ಪಕ್ಷೀಯರಲ್ಲಿ ಕೆಲವರು ಮತದಾನದಿಂದ ಹೊರಗುಳಿಯಬಹುದು ಎಂಬ ಸಂದೇಶ ಬಂದಂದಿನಿಂದ ಆತಂಕ ಹೆಚ್ಚಿದೆ.
ಯುಪಿಎಯಲ್ಲಿಯೇ ಇರುವ ಖಚಿತ ಮತಗಳು 218. ಆದರೆ ಕಾಂಗ್ರೆಸ್‌ನಲ್ಲಿ ನಾಲ್ಕು ಮಂದಿ ಸಂಸದರು ತೀವ್ರ ಅಸಮಾಧಾನಕ್ಕೀಡಾಗಿದ್ದು, ಅವರು ಪಕ್ಷದ ಸಚೇತಕಾಜ್ಞೆಯನ್ನು ಮೀರಿ ಮತ ಚಲಾಯಿಸುವ ಸಾಧ್ಯತೆಗಳೂ ಇವೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ನಾಲ್ವರ ಹೆಸರುಗಳನ್ನು ಸಿಎನ್ಎನ್ ಐಬಿಎನ್ ಬಹಿರಂಗಪಡಿಸಿದ್ದು, ಅದರ ಪ್ರಕಾರ, ಹರ್ಯಾಣದ ಭಿವಾನಿಯ ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದ ಕುಲದೀಪ್ ಬಿಷ್ಣೊಯ್, ಅಸ್ಸಾಂನ ಕಾಂಗ್ರೆಸ್ ಸಂಸದ ಎ.ಎಫ್.ಗುಲಾಂ ಉಸ್ಮಾನಿ ಹಾಗೂ ಕರ್ನಾಟಕದ ಇಬ್ಬರು ಸಂಸದರಾದ ಅಂಬರೀಶ್ ಮತ್ತು ಆರ್.ಎಲ್.ಜಾಲಪ್ಪ ಅವರ ಹೆಸರುಗಳು ಕೇಳಿಬರುತ್ತಿವೆ.
ಚಿಕ್ಕಬಳ್ಳಾಪುರ ಸಂಸದ ಆರ್.ಎಲ್. ಜಾಲಪ್ಪ ಅವರು ಈಗಾಗಲೇ ಕರ್ನಾಟದ ಕಾಂಗ್ರೆಸ್ ನಾಯಕರ ಕಾರ್ಯವೈಖರಿಯಿಂದ ತೀವ್ರ ಅಸಮಾಧಾನಗೊಂಡಿದ್ದು, ಅವರ ಪುತ್ರನಿಗೆ ಈಗಾಗಲೇ ಬಿಜೆಪಿಯು ಲೋಕಸಭೆ ಟಿಕೆಟ್ ನೀಡುವ ಭರವಸೆ ನೀಡಿದ್ದು, ಅವರು ಬಿಜೆಪಿಯತ್ತ ವಾಲುತ್ತಿರುವುದೂ ಸ್ಪಷ್ಟವಾಗುತ್ತಿದೆ.
ಇನ್ನು ಮಂಡ್ಯದ ಗಂಡು ಅಂಬರೀಶ್. ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದರೂ, ನಿಷ್ಠೆ ಬದಲಾಯಿಸುವತ್ತ ಗಂಭೀರ ಯೋಚನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಕರ್ನಾಟಕದಲ್ಲಿ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿರುವ ರಾಜಕೀಯ ಆಟ. ಹಲವು ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿರುವ ಕಾರ್ಯಾಚರಣೆ ಈಗಾಗಲೇ ಜನಜನಿತವಾಗಿದ್ದು, ಬಿಜೆಪಿಯತ್ತ ಮುಖ ಮಾಡಿರುವವರಲ್ಲಿ ಅಂಬರೀಶ್ ಕೂಡ ಒಬ್ಬರು ಎಂದು ಪರಿಗಣಿಸಲಾಗುತ್ತಿದೆ.
ಸೋನಿಯಾ ಗಾಂಧಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಕುಲದೀಪ್ ಅವರು ಹರ್ಯಾಣ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಧುರೀಣ ಭಜನ್ ಲಾಲ್ ಅವರ ಪುತ್ರ. ತಾನು ಯುಪಿಎ ವಿರುದ್ಧ ಮತ ಚಲಾಯಿಸುವುದಾಗಿ ಘೋಷಿಸಿದ್ದು, ಭಾರತ-ಅಮೆರಿಕ ಅಣು ಒಪ್ಪಂದವನ್ನೂ ವಿರೋಧಿಸುವುದಾಗಿ ಹೇಳಿದ್ದಾರೆ.
ಮತ್ತೊಬ್ಬರು, ಗುಲಾಂ ಒಸ್ಮಾನಿ. ಅವರು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ನಾಯಕತ್ವದಿಂದ ತೀವ್ರ ರೋಸಿಹೋಗಿದ್ದಾರೆ.
ಕಾಂಗ್ರೆಸ್‌ನೊಳಗಿನ ತಾಕಲಾಟಗಳ ಹೊರತಾಗಿ, ಹೊಸ ಮಿತ್ರ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಪಕ್ಷದ ಎಲ್ಲ 37 ಸಂಸದರನ್ನು ಜು.22ರಂದು ಒಗ್ಗಟ್ಟಿನಲ್ಲಿ ತಮ್ಮ ಭದ್ರ ಮುಷ್ಟಿಯಲ್ಲಿ ಇರಿಸಿಕೊಳ್ಳಬಲ್ಲರೇ ಎಂಬುದು ಕೂಡ ಕಾಂಗ್ರೆಸ್ ಚಿಂತೆಯ ವಿಷಯ. 39 ಎಸ್ಪಿ ಸಂಸದರಲ್ಲಿ ಇಬ್ಬರು ಈಗಾಗಲೇ ತಾವು ಸರಕಾರದ ವಿರುದ್ಧ ಮತ ಚಲಾಯಿಸುವುದಾಗಿ ಘೋಷಿಸಿದ್ದಾರೆ.
ಜಾತ್ಯತೀತ ಜನತಾ ದಳ, ತೃಣಮೂಲ ಕಾಂಗ್ರೆಸ್, ಅಜಿತ್ ಸಿಂಗ್ ಅವರ ಲೋಕದಳ, ಶಿರೋಮಣಿ ಅಕಾಲಿ ದಳ, ತೆಲಂಗಣ ರಾಷ್ಟ್ರ ಸಮಿತಿ ಮುಂತಾದ ಸಣ್ಣ ಪಕ್ಷಗಳು ತಮ್ಮ ನಿಲುವಿಗೆ ಇನ್ನೂ ಸ್ಪಷ್ಟ ರೂಪ ಕೊಡದೆ ಕಾಂಗ್ರೆಸ್ಸನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ. ಸರಕಾರ ಉಳಿಯಬೇಕಿದ್ದರೆ ಇತರರು ಅಥವಾ ಸಂಭಾವ್ಯರು ಎಂದುಕೊಳ್ಳಲಾಗುವ 20 ಸಂಸದರಲ್ಲಿ ಕನಿಷ್ಠ 16 ಸಂಸದರ ಬೆಂಬಲ ಕಾಂಗ್ರೆಸ್‌ಗೆ ಬೇಕೇ ಬೇಕಾಗುತ್ತದೆ ಎಂಬುದು ಒಂದು ಲೆಕ್ಕಾಚಾರ.
|