ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದದ ಬಗ್ಗೆ ಭಾರತವು ಇಂದು ವಿಯೆನ್ನಾದಲ್ಲಿ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮಂಡಳಿಯ 35 ಮಂದಿ ಸದಸ್ಯರಿಗೆ ಸುರಕ್ಷತಾ ಒಪ್ಪಂದದ ಬಗ್ಗೆ ವಿವರಣೆಯನ್ನು ನೀಡಲಿದೆ.
ಭಾರತದ ಪರಮಾಣು ಸೌಲಭ್ಯಗಳ ಕುರಿತು ಭಾರತದ ವಿದೇಶ ಕಾರ್ಯದರ್ಶಿ ಶಿವಶಂಕರ ಮೆನನ್ ಹಾಗೂ ಇತರ ಅಧಿಕಾರಿಗಳು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ) ಹಾಗೂ ಪರಮಾಣು ಪೂರೈಕೆದಾರರ ಗುಂಪಿನ ದೇಶಗಳಿಗೆ ಸುರಕ್ಷತಾ ಒಪ್ಪಂದದ ಬಗ್ಗೆ ವಿವರಣೆಯನ್ನು ನೀಡುವರು.
ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ 35 ಸದಸ್ಯರು ಹಾಗೂ ಪರಮಾಣು ಪೂರೈಕೆದಾರರ ಗುಂಪಿನಲ್ಲಿರುವ ಹಲವಾರು ದೇಶಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ. ಪ್ರಸ್ತುತ ಸಮಾರಂಭದಲ್ಲಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಭಾಗವಹಿಸುತ್ತಿದ್ದು ಇವುಗಳ ಪರಮಾಣು ಒಪ್ಪಂದಕ್ಕೆ ಬೆಂಬಲವನ್ನು ಸೂಚಿಸಿವೆ.
ಏತನ್ಮಧ್ಯೆ ಚೀನಾ ದೇಶವು ಐಎಇಎಯಲ್ಲಿ ಸುರಕ್ಷತಾ ಒಪ್ಪಂದವನ್ನು ನಿರೋಧಿಸುವುದಿಲ್ಲವಾದರೂ ಬಲ್ಲ ಮೂಲಗಳ ಪ್ರಕಾರ ಇದು ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ.
ಅಂತೂ ಒಟ್ಟಿನಲ್ಲಿ ಸುರಕ್ಷತಾ ಒಪ್ಪಂದ ಅನುಮೋದನೆಯಾಗಬೇಕಾದರೆ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯಲ್ಲಿ ಬಹುಮತ ಸಾಬೀತಾಗಬೇಕಾಗಿದೆ. ಇದಕ್ಕಾಗಿ ಐಎಇಎ ಮಂಬರುವ ಆಗಸ್ಟ್ 1ರಂದು ಮತದಾನ ನಡೆಸಲಿದೆ.
|