ಸರಕಾರ ರಕ್ಷಣೆ ನಿಟ್ಟಿನಲ್ಲಿ ಇದೀಗ ಭಾರತೀಯ ರಾಜಕಾರಣದ ಅತ್ಯಂತ ಮಹತ್ವದ ವ್ಯಕ್ತಿಯಾಗಿ ಮೂಡಿಬಂದಿರುವ ಜಾರ್ಖಂಡ್ ಮುಕ್ತಿ ಮೋರ್ಚಾದ ಶಿಬು ಸೋರೆನ್‌ಗೆ ಮಂತ್ರಿಗಿರಿ ನೀಡಿ ಸೆಳೆದುಕೊಳ್ಳಲು ಯುಪಿಎ ಸಿದ್ಧವಾಗುತ್ತಿದ್ದಂತೆಯೇ, ಶುಕ್ರವಾರ ದಿಢೀರನೆ ಕಾಣಿಸಿಕೊಂಡ ಸೋರೆನ್, ಎನ್‌ಡಿಎ ಸಂಸದರ ಜತೆ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಸರಕಾರ ಉಳಿಸುವ ಕಾಂಗ್ರೆಸ್ ಪ್ರಯತ್ನ ದಿನೇ ದಿನೇ ತ್ರಾಸದಾಯಕವಾಗತೊಡಗಿರುವುದರಿಂದ, ಸರಕಾರ ಉರುಳಿಸುವ ಸಾಧ್ಯತೆಗಳ ವಾಸನೆ ಹಿಡಿದಿರುವ ಪ್ರತಿಪಕ್ಷ ಬಿಜೆಪಿ, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ, ಐದು ಸಂಸದರನ್ನು ಬುಟ್ಟಿಯಲ್ಲಿಟ್ಟಿಕೊಂಡಿರುವ ಶಿಬು ಸೋರೆನ್ ಬೆನ್ನು ಹತ್ತಿತ್ತು.
ಸೋರೆನ್ ಅವರು ಶುಕ್ರವಾರ ಎನ್‌ಡಿಎ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ತಮ್ಮ ಮಾಜಿ ಸಹವರ್ತಿಯ ಈ ಕ್ರಮದಿಂದಾಗಿ ಕಾಂಗ್ರೆಸ್ ಹತಾಶೆಯಿಂದ ಕೈಕೈ ಹಿಸುಕಿಕೊಳ್ಳುತ್ತಿದೆ.
1993ರಲ್ಲಿ ನರಸಿಂಹ ರಾವ್ ಸರಕಾರವನ್ನು ಪತನವಾಗದಂತೆ ನೋಡಿಕೊಂಡಿದ್ದ ಜೆಎಂಎಂ, ಈಗಲೂ ಕಾಂಗ್ರೆಸ್ ನೇತೃತ್ವದ ಸರಕಾರವೊಂದಕ್ಕೆ ಸಂಜೀವಿನಿಯಾಗಬಹುದಾಗಿದೆ.
ಕರಾಳ ಹಿನ್ನೆಲೆ: ಆದರೆ ಶಿಬು ಸೋರೆನ್ ಅವರ 'ಕಳಂಕಿತ' ಹಿನ್ನೆಲೆಯೇ ಕಾಂಗ್ರೆಸ್‌ಗೆ ನುಂಗಲಾರದ ತುತ್ತು. 2004ರಲ್ಲಿ ಕೇಂದ್ರ ಕಲ್ಲಿದ್ದಲು ಖಾತೆ ಸಚಿವರಾಗಿದ್ದಾಗ, 20 ವರ್ಷ ಹಳೆಯ ಪ್ರಕರಣವೊಂದು ಸೋರೆನ್ ಬೆಂಬತ್ತಿ ಬಂದಿತ್ತು. 1975ರಲ್ಲಿ ಚಿರುಧಿ ಹತ್ಯಾಕಾಂಡಕ್ಕೆ ಸಂಬಂಧಿಸಿ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾದಾಗ, ಹಲವು ದಿನಗಳ ಕಣ್ಣಾ ಮುಚ್ಚಾಲೆಯಾಟ ಆಡಿದ ಶಿಬು ಸೋರೆನ್ ಕೊನೆಗೂ ಒಲ್ಲದ ಮನಸ್ಸಿನಿಂದಲೇ ಮಂತ್ರಿ ಪದವಿ ಬಿಟ್ಟುಕೊಟ್ಟಿದ್ದರು.
ಜೆಎಂಎಂ ಲಂಚ ಹಗರಣದಲ್ಲಿ ಶಿಬು ಸೋರೆನ್ ಪಾತ್ರ ಸರ್ವ ವಿದಿತ. 2006ರಲ್ಲಿ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಅವರ ಹತ್ಯೆಗೆ ಸಂಬಂಧಿಸಿಯೂ ಸೋರೆನ್ ಅವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಅದರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಸೋರೆನ್, ಕೆಲ ಕಾಲ ಜೈಲಿನಲ್ಲಿ ಕಳೆದು, ಶಿಕ್ಷೆ ಪ್ರಶ್ನಿಸಿ ಮನವಿ ಸಲ್ಲಿಸಿದ ಬಳಿಕ, ವಿಚಾರಣೆ ನಡೆದು ಅವರು ದೋಷಮುಕ್ತರಾಗಿದ್ದರು.
ಕಾಂಗ್ರೆಸ್ ತಳಮಳ: ಸಂಖ್ಯೆಗಳ ಆಟದಲ್ಲಿ ತೀವ್ರ ಆತಂಕಕಾರಿ ಪರಿಸ್ಥಿತಿ ಎದುರಿಸುತ್ತಿರುವ ಕಾಂಗ್ರೆಸ್, ಈಗಾಗಲೇ ತಮ್ಮದೇ ಪಕ್ಷದ ನಾಲ್ವರಿಂದ ಬಂಡಾಯ ಎದುರಿಸುತ್ತಿದ್ದು, ಸಮಾಜವಾದಿ ಪಕ್ಷದ 39ರಲ್ಲಿ ಇಬ್ಬರ ಮತ ಕೂಡ ದೊರೆಯುವುದು ಕಷ್ಟ.
ಆ ನಾಲ್ವರು ಯಾರು? ಇಲ್ಲಿ ಕ್ಲಿಕ್ ಮಾಡಿ.
ಇನ್ನೊಂದೆಡೆ, ಡಿಎಂಕೆಯ ದಯಾನಿಧಿ ಮಾರನ್ ಕೂಡ ಮತದಾನದಿಂದ ಹೊರಗುಳಿಯುವ ಆಲೋಚನೆಯಲ್ಲಿದ್ದಾರೆ. ರಾಷ್ಟ್ರೀಯ ಲೋಕದಳವಿನ್ನೂ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ, ದೇವೇಗೌಡರ ಜನತಾ ದಳ ಶುಕ್ರವಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಶಿರೋಮಣಿ ಅಕಾಲಿ ದಳ, ನ್ಯಾಷನಲ್ ಕಾನ್ಫರೆನ್ಸ್ ಕೂಡ ಅನಿಶ್ಚಿತ. ಇದು ಕಾಂಗ್ರೆಸ್ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಮಂಗಳವಾರದ 'ಮಹಾನ್ ಮತದಾನ'ದ ದಿನಕ್ಕೆ ಇನ್ನುಳಿದಿರುವುದು ನೂರು ಗಂಟೆ ಮಾತ್ರ. ಆದರೆ 271 ಮ್ಯಾಜಿಕ್ ಸಂಖ್ಯೆ ದೊರೆಯಬೇಕಿದ್ದರೆ ಕನಿಷ್ಠ 22 ಸಂಸದರ ಬಲ ಒಗ್ಗೂಡಿಸಬೇಕಾಗಿದೆ. ಒಂದೊಂದು ಮತವೂ ಅಮೂಲ್ಯವಾಗಿರುವುದರಿಂದ ಜೈಲಿನಲ್ಲಿದ್ದ ಸಂಸದರಿಗೆ ಕೂಡ ಮತ ಚಲಾಯಿಸಲು ಅವಕಾಶಗಳನ್ನು ಮಾಡಿಕೊಡಲಾಗುತ್ತಿದೆ.
ಆರು ಸ್ವತಂತ್ರರಲ್ಲಿ ನಾಲ್ವರು ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಲೋಕದಳದ ಅಜಿತ್ ಸಿಂಗ್ ಮನವೊಲಿಕೆಗಾಗಿ ಲಖನೌ ವಿಮಾನ ನಿಲ್ದಾಣಕ್ಕೆ ಅವರ ತಂದೆ, ಮಾಜಿ ಪ್ರಧಾನಿ ಚರಣ್ ಸಿಂಗ್ ಹೆಸರಿರಿಸಲು ಕೇಂದ್ರವು ಒಪ್ಪಿಗೆ ಸೂಚಿಸಿದ್ದರೂ, ಅತ್ತಕಡೆಯಿಂದ ಸಿಪಿಐ ಮುಖಂಡರೂ 3 ಬಲವಿರುವ ಆರ್ಎಲ್‌ಡಿ ಬೆಂಬಲ ಪಡೆಯಲು ತೀವ್ರ ಪ್ರಯತ್ನ ನಡೆಸಿದ್ದಾರೆ.
ಇಬ್ಬರು ಸಂಸದರ ಬಲವಿರುವ ನ್ಯಾಷನಲ್ ಕಾನ್ಫರೆನ್ಸ್ ಕೂಡ ತನ್ನ ನಿಲುವು ಇನ್ನೂ ಬಹಿರಂಗಪಡಿಸಿಲ್ಲ. ಎನ್‌ಡಿಎ ಮತ್ತು ಯುಪಿಎ ಕಡೆಯವರು ಅವರಿಗೂ ಗಾಳ ಹಾಕಲಾರಂಭಿಸಿದ್ದಾರೆ.
ಪಕ್ಷಾಂತರ ಕಾಯಿದೆ ದೊಡ್ಡ ತಲೆನೋವಲ್ಲ ಎಂಬುದು ಎಲ್ಲರಿಗೂ ತಿಳಿದಿರುವುದರಿಂದ ಮುಂದಿನ ಕೆಲವೇ ಕೆಲವು ದಿನಗಳಲ್ಲಿ ಸಾಕಷ್ಟು ಆಯಾ ರಾಮ್ ಗಯಾ ರಾಮ್‌ಗಳು ಕಾಣಸಿಗಬಹುದಾಗಿದೆ.
|