ಲೋಕಸಭೆಯಲ್ಲಿ ಜುಲೈ 22ರಂದು ನಡೆಯಲಿರುವ ವಿಶ್ವಾಸಮತದಲ್ಲಿ ಸರಕಾರ ವಿರುದ್ಧ ಮತ ಚಲಾಯಿಸುವಂತೆ ಎಂಡಿಎಂಕೆ ಪಕ್ಷ ತನ್ನ ನಾಲ್ವರು ಸಂಸದರಿಗೆ ವಿಪ್ ಹೊರಡಿಸಿದೆ. ಆದರೆ ಇದರಲ್ಲಿ ಇಬ್ಬರು ಸಂಸದರು ಸರಕಾರ ಪರ ನಿಲುವು ಹೊಂದಿದವರಾಗಿದ್ದಾರೆ.
ಎಂಡಿಎಂಕೆ ನಾಯಕ ವೈಕೋ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪಕ್ಷದ ಅಧಿಕೃತ ಸಂಸದರಾದ ಸಿ ಕೃಷ್ಣನ್ ಅವರು ಇತರ ಸದಸ್ಯರಾದ ಎ ರವಿಚಂದ್ರನ್, ಎಲ್ ಗಣೇಶನ್ ಮತ್ತು ಜಿಂಜಾ ರಾಮಚಂದ್ರನ್ ಅವರಿಗೆ ವಿಪ್ ಹೊರಡಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಇದರಲ್ಲಿ ಎಲ್ ಗಣೇಶನ್ ಮತ್ತು ಜಿಂಜಾ ರಾಮಚಂದ್ರನ್ ಭಿನ್ನಮತ ಹೊಂದಿದವರಾಗಿದ್ದಾರೆ.
ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿಯವರಿಗೆ ಕಳುಹಿಸಿದ ಪತ್ರದಲ್ಲಿ ವೈಕೋ ಅವರು, ತಮ್ಮ ನೇತೃತ್ವದ ಪಕ್ಷವನ್ನು ಚುನಾವಣಾ ಆಯೋಗವು ನೈಜ ಎಂಡಿಎಂಕೆ ಎಂಬುದಾಗಿ ಮಾನ್ಯಮಾಡಿದ್ದು, ಈ ಹಿನ್ನೆಲೆಯಲ್ಲಿ ತಾನು ತನ್ನ ಪಕ್ಷದ ನಿಲುವನುಸರಿಸಿ ಪಕ್ಷದ ಸದಸ್ಯರಿಗೆ ವಿಪ್ ಹೊರಡಿಸುವುದಾಗಿ ಹೇಳಿದ್ದಾರೆ.
ಆದಾಗ್ಯೂ, ಪಕ್ಷದ ಸಂಸದರು ಪಕ್ಷದ ನಿರ್ದೇಶನದ ವಿರುದ್ಧವಾಗಿ ಮತ ಚಲಾವಣೆ ಮಾಡಿದರೆ ಏನು ಮಾಡುವಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಮತದಾನ ಚಲಾಯಿಸಿದ ನಂತರ ನೋಡೋಣ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಯುಪಿಎ ಸರಕಾರವು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಸರಕಾರವನ್ನು ಪರಾಭವಗೊಳಿಸುವುದೇ ತನ್ನ ನಿರ್ಧಾರ ಎಂಬುದಾಗಿ ಅವರು ಹೇಳಿದ್ದಾರೆ. ಸಚಿವ ಖಾತೆ ನೀಡುವ ಮೂಲಕ ಅಥವಾ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಮೂಲಕ ಬೆಂಬಲವನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸರಕಾರದ ನಿಲುವು ವಿಶ್ವಾಸಾರ್ಹತೆಗೆ ಚ್ಯುತಿ ತರುವಂತಹದ್ದು ಎಂಬುದಾಗಿ ವೈಕೋ ಅಭಿಪ್ರಾಯ ಪಟ್ಟಿದ್ದಾರೆ.
|