ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಗಣಿತದ ಕೌಶಲ್ಯ ಹೆಚ್ಚಿಸಲು, ವೈಜ್ಞಾನಿಕ ಮನೋಭಾವ ಮತ್ತು ಸಾಹಿತ್ಯದ ಅಭಿರುಚಿ ಬೆಳೆಸುವುದಕ್ಕಾಗಿ ಬಿಹಾರ ಸರಕಾರ ಪತ್ರಿಕೆಯೊಂದನ್ನು ಹೊರತಂದಿದೆ.
ಒಂದರಿಂದ ಐದನೆ ತರಗತಿ ವರೆಗಿನ ವಿದ್ಯಾರ್ಥಿಗಳ ಆವಶ್ಯಕತೆಗಳನ್ನು ಪೂರೈಸಲು ಬಿಹಾರ ಶೈಕ್ಷಣಿಕ ಯೋಜನಾ ಮಂಡಳಿ(ಬಿಇಪಿಸಿ) ಮತ್ತು ಎನ್‌ಜಿಒ ಸಂಸ್ಥೆ 'ಪ್ರಥಮ್' ಸಹಯೋಗದೊಂದಿಗೆ 'ಬಚ್‌ಪನ್' ಎಂಬ ಹಿಂದಿ ಪಾಕ್ಷಿಕ ಪತ್ರಿಕೆಯನ್ನು ಹೊರತರಲಾಗಿದೆ.
"ಇದು ಮಕ್ಕಳಿಗೆ ಪಠ್ಯಕ್ರಮದ ಹೊರತಾಗಿ ಹೆಚ್ಚಿನ ಓದಿನ ಸಲಕರಣೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ," ಎಂದು ಸರ್ವ ಶಿಕ್ಷಾ ಅಭಿಯಾನ (ಎಸ್.ಎಸ್.ಎ)ದ ರಾಜ್ಯ ಸಂಯೋಜಕ ಎ.ಕೆ. ಪಾಂಡೆ ತಿಳಿಸಿದ್ದಾರೆ.
ಸಾರ್ವತ್ರಿಕ ಶಿಕ್ಷಣದ ಅಭಿಯಾನ, ಎಸ್.ಎಸ್.ಎಯನ್ನು ಬಿಹಾರದಲ್ಲಿ ಬಿಇಪಿಸಿ ಜಾರಿಗೆ ತಂದಿದೆ.
ಸರಕಾರಿ ಆಧೀನದಲ್ಲಿರುವ ಶಾಲೆಗಳು ಮತ್ತು ಎಸ್.ಎಸ್.ಎ ಅಡಿಯಲ್ಲಿ-ವೈಶಾಲಿ, ಜಾಮುಯಿ, ಅರರಿಯಾ, ಕಿಶನ್‌ಗಂಜ್, ಸೀತಾಮರ್ಹಿ,ಶಿಹೊಹಾರ್ ಮತ್ತು ರೊಹ್ತಾಸ್ ಈ ಏಳು ಜಿಲ್ಲೆಗಳಲ್ಲಿ ರಚಿಸಲಾದ 10,000 ಶಾಲೆಗಳ ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ಹಂಚಲಾಗುತ್ತಿದೆ ಎಂದು ಪಾಂಡೆ ತಿಳಿಸಿದ್ದಾರೆ.
ಮೇಯಲ್ಲಿ ಪತ್ರಿಕೆಯ ಪ್ರಕಟಣೆ ಆರಂಭವಾದ ನಂತರ ಐದು ಲಕ್ಷಗಳಿಗಿಂತಲೂ ಹೆಚ್ಚು ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಲಾಗಿದೆ ಎಂದು 'ಪ್ರಥಮ್'ನ ರಾಜ್ಯ ಸಂಯೋಜಕ ಸಂಜಯ್ ಕುಮಾರ್ ತಿಳಿಸಿದ್ದಾರೆ. ತಮ್ಮ ಮಾರಟಗಾರರ ಜಾಲದ ಮೂಲಕ ಪತ್ರಿಕೆಯ ಹಂಚಿಕೆಯ ಹೊಣೆಯನ್ನು ಹೊತ್ತಿರುವ ರಾಷ್ಟ್ರೀಯ ಹಿಂದಿ ದಿನ ಪತ್ರಿಕೆಯೊಂದು ಈ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪತ್ರಿಕೆಯ ಮುದ್ರಣ ಮತ್ತು ಹಂಚಿಕೆಗಾಗಿ ಬಿಇಪಿಸಿ ದಿನಪತ್ರಿಕೆಗೆ ಪ್ರತಿಗೆ ಒಂದು ರೂಪಾಯಿಯಂತೆ ಪಾವತಿ ಮಾಡುತ್ತಿದೆ.
|