ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ವಿಶ್ವಾಸಮತ ಸಾಬೀತಿಗೆ ಕ್ಷಣಗಣನೆ ಆರಂಭವಾಗಿದ್ದು, ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ (272)ಗಾಗಿ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ''ಕುದುರೆ ವ್ಯಾಪಾರ''ದ ಕಸರತ್ತು ಆರಂಭಗೊಳ್ಳುವ ಮೂಲಕ ಭರ್ಜರಿ ''ಭೇಟೆ''ಗೆ ಚಾಲನೆ ದೊರೆತಿರುವುದಾಗಿ ರಾಷ್ಟ್ರರಾಜಕಾರಣದ ವಲಯದಲ್ಲಿ ಗುಸುಗುಸು ಹಬ್ಬತೊಡಗಿದೆ.
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದದ ಬಿಕ್ಕಟ್ಟಿನಿಂದಾಗಿ, ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ವಾಪಸ್ ತೆಗೆದುಕೊಂಡ ಪರಿಣಾಮ, ಯುಪಿಎ ಜು.22ರಂದು ಸಂಸತ್‌ನಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಶ್ವಾಸಮತದ ಸಂದರ್ಭದಲ್ಲಿ ಸಣ್ಣ-ಪುಟ್ಟ ಪಕ್ಷಗಳಿಂದ ಅಡ್ಡಮತದಾನ, ಕುದುರೆ ವ್ಯಾಪಾರ ನಡೆಯುತ್ತಿರುವುದಾಗಿ ಆರೋಪ ಕೇಳಿ ಬರುತ್ತಿದೆ.
ವಾರದ ಹಿಂದಷ್ಟೇ ಯುಪಿಎ ಸರಕಾರ ವಿಶ್ವಾಸಮತ ಪಡೆಯುವ ವಿಶ್ವಾಸವನ್ನು ಹೊಂದಿತ್ತು, ಆದರೆ ದಿನಕಳೆದಂತೆ ಸಣ್ಣ ಪಕ್ಷಗಳೇ ಯುಪಿಎ ವಿರುದ್ಧ ಹರಿಹಾರಿಯುವ ಮೂಲಕ,ಯುಪಿಎ ವಿರುದ್ಧ ಮತಚಲಾಯಿಸುವುದಾಗಿ ಘೋಷಿಸಿದೆ. ಇದರಿಂದಾಗಿ 543 ಸದಸ್ಯ ಬಲದ ಸಂಸತ್‌ನಲ್ಲಿ 272 ಸದಸ್ಯ ಬಲವನ್ನು ಹೊಂದಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಹಳಷ್ಟು ''ಸರ್ಕಸ್'' ಮಾಡಬೇಕಾದ ಸ್ಥಿತಿ ಎದುರಾಗಿದೆ.
ಯುಪಿಎ ಬಲ:
ಎಡಪಕ್ಷಗಳ ಬೆಂಬಲ ಹಿಂತೆಗೆತದಿಂದಾಗಿ, ಯುಪಿಎ ಬಲ 217ಕ್ಕೆ ಕುಸಿದಿದೆ. ಏತನ್ಮಧ್ಯೆ ಸಮಾಜವಾದಿ ಪಕ್ಷದ 35ಸದಸ್ಯರ ಬೆಂಬಲದೊಂದಿಗೆ ಒಟ್ಟು 257 ಸದಸ್ಯರ ಬಲ ಹೊಂದಲಿದೆ. ಉಳಿದ 15 ಸದಸ್ಯರಿಗಾಗಿ ಯುಪಿಎ ಯಾವ ತೆರನಾದ ಹಾದಿ ತುಳಿಯುತ್ತಿದೆ ಎಂದು ಕಾದು ನೋಡಬೇಕಾಗಿದೆ.
ಸಣ್ಣ ಪಕ್ಷಗಳ ಕಿರಿಕ್:
ಪ್ರತಿಯೊಬ್ಬ ಸದಸ್ಯರ ಬೆಂಬಲವೂ ಅಗತ್ಯವಾಗಿರುವ ನಿಟ್ಟಿನಲ್ಲಿ, ಸಣ್ಣ-ಪುಟ್ಟ ಪಕ್ಷಗಳ ಸಂಸದರಿಗೂ ಬಹಳ ಬೇಡಿಕೆ ಬಂದಿದೆ. ಆದರೆ ಜಾರ್ಖಂಡ್ ಮುಕ್ತಿ ಮೋರ್ಚಾದ ಶಿಬು ಸೊರೇನ್, ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್, ನ್ಯಾಷನಲ್ ಕಾನ್ಫರೆನ್ಸ್‌ನ ಓಮರ್ ಅಬ್ದುಲ್ಲಾ ಅವರು ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಪ್ರಧಾನಿ-ದೇವೇಗೌಡ ಭೇಟಿ:
ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ಶನಿವಾರದಂದು ಜನತಾದಳದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮತ ಹಣಾಹಣಿ:
ಯುಪಿಎ-217, ಸಮಾಜವಾದಿ-35, ಇತರ-05 ಒಟ್ಟು-257. ಎನ್‌ಡಿಎ-170, ಎಡಪಕ್ಷ-58, ಬಿಎಸ್ಪಿ-17, ಸಮಾಜವಾದಿ ಬಂಡಾಯಗಾರರು-04,ಕಾಂಗ್ರೆಸ್ ಬಂಡಾಯ-01, ಇತರೆ-15 ಒಟ್ಟು-265.
|