ಲೋಕಸಭೆಯಲ್ಲಿ ನಡೆಯುವ ವಿಶ್ವಾಸಮತ ಗೊತ್ತುವಳಿಯಲ್ಲಿ ಕಾಂಗ್ರೆಸ್ ಸರಕಾರವನ್ನು ಪರಾಭವಗೊಳಿಸಲು ಎನ್‌ಡಿಎ ಪಣ ತೊಟ್ಟಿದ್ದು, ಅನಾರೋಗ್ಯದಿಂದಿರುವ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಜುಲೈ 22ರ ಮತದಾನ ಸಂದರ್ಭ ಸದನಕ್ಕೆ ಕರೆತರಲು ತೀವ್ರವಾಗಿ ಯತ್ನಿಸುತ್ತಿದೆ.
ವಾಜಪೇಯಿಯವರು ಅಸ್ವಸ್ಥರಾಗಿರುವ ಕಾರಣ ಕೆಲವು ತಿಂಗಳುಗಳಿಂದ ಸಾರ್ವಜನಿಕ ಸಮಾರಂಭಗಳಿಂದ ದೂರವಿದ್ದು, ಇದೀಗ ಜುಲೈ 22ರಂದು ತಮ್ಮ ಮತಹಾಕಲು ಸಂಸತ್ತಿಗೆ ಆಗಮಿಸಲಿದ್ದಾರೆ. ಆದರೆ ಲಕ್ನೋ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧೀಕರಿಸುವ ಇವರು ಲೋಕಸಭೆಗೆ ಪ್ರವೇಶಿಸುವುದಿಲ್ಲ. ಬದಲಾಗಿ ಅವರು ಲಾಬಿಯಿಂದಲೇ ಮತದಾನ ಮಾಡಲಿರುವರು.
ಪ್ರಸ್ತುತ ವಾಜಪೇಯಿ ಅವರಿಗೆ ಆರೋಗ್ಯ ಸಮಸ್ಯೆಯಿದೆ. ಆದುದರಿಂದ ನಾವು ಈ ಬಗ್ಗೆ ಸ್ಪೀಕರ್ ಮತ್ತು ಪ್ರಧಾನ ಕಾರ್ಯದರ್ಶಿಯವರಲ್ಲಿ ಮಾತನಾಡಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಲಾಬಿಯಲ್ಲಿ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಾರ್ವಜನಿಕ ಸಮಾರಂಭಗಳಿಂದ ದೂರ ಸರಿದಿದ್ದ ವಾಜಪೇಯಿ ಅವರು ಆರೋಗ್ಯ ಸಮಸ್ಯೆ ನಿಮಿತ್ತ ಕಳೆದ 2007 ಡಿಸೆಂಬರ್ 25ರ ಹುಟ್ಟುಹಬ್ಬದ ಆಚರಣೆಯಲ್ಲಿ ಕೂಡಾ ಭಾಗವಹಿಸಿರಲಿಲ್ಲ.
|