ಲೋಕಸಭೆಯಲ್ಲಿ ಜುಲೈ 22ರಂದು ಯುಪಿಎ ಸರಕಾರವು ವಿಶ್ವಾಸ ಮತ ಯಾಚಿಸಲಿರುವ ಹಿನ್ನೆಲೆಯಲ್ಲಿ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪಕ್ಷದ ಎಲ್ಲಾ ಸಂಸದರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ವಿಶ್ವಾಸಮತದಲ್ಲಿ ಗೆಲುವು ಸಾಧಿಸುವುದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕೆಂದು ಸೋನಿಯಾಗಾಂಧಿ ತಮ್ಮ ಸಂಸದರಿಗೆ ಕರೆ ನೀಡಿದ್ದಾರೆ.
ಶನಿವಾರ ಬೆಳಗ್ಗೆ 10 ಜನಪಥ್ ನಿವಾಸದಲ್ಲಿ ಪಕ್ಷದ ಸಂಸದರೊಂದಿಗೆ ಸೋನಿಯಾ ಗಾಂಧಿ ಸಮಾಲೋಚನೆ ನಡೆಸಿದ್ದು, ವಿಶ್ವಾಸ ಮತದಲ್ಲಿ ಮ್ಯಾಜಿಕ್ ಸಂಖ್ಯೆಯಾದ 271 ಮಂದಿಯ ಬೆಂಬಲವನ್ನು ಪಡೆಯಲು ಕಾಂಗ್ರೆಸ್ ಪಕ್ಷವು ಶತಾಯಗತಾಯ ಪ್ರಯತ್ನಿಸುತ್ತಿದೆ.
ಏತನ್ಮಧ್ಯೆ, ಜೆಎಂಎಂನ ಐದು ಸಂಸದರು ಸರಕಾರಕ್ಕೆ ಬೆಂಬಲ ನೀಡುವ ಸೂಚನೆ ಲಭಿಸಿದೆ. ಆದರೆ ಪ್ರಸ್ತುತ ಪಕ್ಷದ ನಾಯಕ ಶಿಬು ಸೋರೆನ್ ಅವರು ಎನ್‌ಡಿಎ ಅಥವಾ ಯುಪಿಎ ಪರ ವಹಿಸುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಶ್ವಾಸಮತದಲ್ಲಿ ಯಾರಿಗೆ ಮತ ನೀಡಬೇಕೆಂಬುದರ ಬಗ್ಗೆ ಶನಿವಾರ ಜೆಎಂಎಂ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
|